"ಪಾಪ ಅಜ್ಜಿ"
ಮ್ಮೆ ಬೆಳಗ್ಗಿನಿಂದಲೂ ಕೂಗುತ್ತಿತ್ತು. ಅಜ್ಜಿಗೆ ಹುಶಾರಿರಲಿಲ್ಲ.

ನಾನಾಗಲೇ ಶಾಲೆಗೆ ಹೊರ‍ಡುವ ಸನ್ನಾಹದಲ್ಲಿದ್ದೆ. ಅಪ್ಪ ತಯಾರಾಗಿದ್ದರು. ಇಬ್ಬರದೂ ಒಂದೇ ಶಾಲೆ... ೫ನೇ ತರಗತಿ. ವ್ಯತ್ಯಾಸವಿಷ್ಟೇ - ಅಪ್ಪ ಗುರು ... ನಾ ಶಿಷ್ಯ. ಸೈಕಲ್ ನ್ನು ಆಗಲೇ ಹೆದ್ದಾರಿ ಹತ್ತಿಸಿ, ೩-೪ ಸುತ್ತು ಒಳ ಪೆಡ್ಲಲ್ಲಿ ಸೈಕಲ್ ಹೊಡೆದು ವಾರ್ಮ್ ಅಪ್ ಆಗಿದ್ದೆ. (ಹೆದ್ದಾರಿ ಅಂದ್ರೆ ನಮ್ಮ ಮನೆಯಿಂದ ರಸ್ತೆಗೆ ಹೋಗುವ ಮೆಟ್ಟಿಲು ಸಾರಿ.)

ಅಪ್ಪ ರಸ್ತೆಗೆ ಬಂದರು. "ನೀ ಇವತ್ತು ಬಪ್ಪುದ್ ಬ್ಯಾಡ. ಎಮ್ಮೆ ಕೂಗ್ತಾ ಇದ್ದು .. ತಿಪ್ಪಯ್ಯನ ಸಂತಿಗೆ ಗುಜ್ನಕ್ಕೆಗೆ  ಹೋಗ್ ಬಾ
- ಎಮ್ಮೆ ಹೊಡ್ಕಂಡು". ಎಂದರು. ಎಮ್ಮೆ ಕೂಗುವುದು ನೆಸಲೇರಿದಾಗ. ಇಡೀ ಚೌಕಗ್ರಾಮದಲ್ಲೇ ’ಗುಜ್ನಕೆ ಕೋಣ’ ಪ್ರಸಿದ್ಧ ಕೋಣ. ಎಮ್ಮೆ ಕೂಗಿದಾಗ ಗುಜ್ನಕೆ ಗೆ (ಕೋಣನಲ್ಲಿ) ಹೋಗುವುದು ವಾಡಿಕೆ.

ಸರಿ, ನಾ ಹೊರ‍ಡಲನುವಾದೆ.
ಅಜ್ಜಿ ಮಲಗಿದಲ್ಲಿಂದಲೇ "ತಮಾ ಕೋಣ ಸರೀ ಹತ್ತಿದ್ದ ನೋಡ್ತಾ ಇರು.... ಆ ಸುಬ್ರಾಯ ಹತ್ತಿಸ್ದಾಂಗ್ ಮಾಡ್ತ. ಗಬ್ಬ ನಿಲ್ತಿಲ್ಲೆ ಕಡೆಗೆ.. ನಾ ಬತ್ತಿದ್ದೆ.. ನಂಗೆ ಆರಾಮಿಲ್ಲೆ" ಎಂಬ ಸಲಹೆಯನ್ನೂ ಕೇಳಿಸಿಕೊಂಡೆ. ಆಗಲೇ ತಿಪ್ಪಯ್ಯ ಎಮ್ಮೆಗೆ ದಾಬು ಹಾಕಿ ಹಿಡಿದು ಹೊರಡಲನುವಾಗಿದ್ದ. ನನಗೋ ಒಂಥರ ಖುಶಿ. ಜವಾಬ್ದಾರಿ ಕೊಟ್ಟಿಂದ್ದರಿಂದ ಜಂಭ ಬೇರೆ. ಅಂಗಿಯ ತೋಳನ್ನು ಸಲ್ಪ ಮೇಲೇಯೇ ಅನ್ನುವಷ್ಟು ಏರಿಸಿ ಹೊರಟೆ. ಎಮ್ಮೆಗೆ ಕೋಣನ ಮಿಲಾಯಿಸಿ ತಿರುಗಿ ಬರುವಾಗ ಸುಮಾರು ೧ ಘ೦ಟೆ ಬಾರಿಸಿತ್ತು.

ಬರುವಾಗಲೇ ರಸ್ತೆಯ ಮೇಲೆ ಎರಡು ಬೈಕ್ ನಿಂತಿದ್ದವು. ಎರಡೂ ಡಾಕ್ಟರ್ ಮಾವಂದಿರು ಇವತ್ತೇ ಯಾಕೆ ಬಂದಿದ್ದಾರೆ ಎಂಬ ಕುತೂಹಲವೂ ಆಯ್ತು. ಎಮ್ಮೆಗಿಂತ ಬೇಗ ಓಡಿ ಮನೆ ಸೇರಿದೆ. ಎರಡೂ ಮಾವಂದಿರೂ ಅಪ್ಪನ ಎದುರು ಜಗಲಿಯಲ್ಲಿ ಕುಂತಿದ್ದರು. "ನಮಸ್ಕಾರ ಮಾವಯ್ಯ" ಎಂದವನೇ ಅಜ್ಜಿಗೆ ಎಮ್ಮೆಯ ಸುದ್ದಿ ಹೇಳೋಣವೆಂದು ಒಳ ಓಡಿದೆ. ಅಜ್ಜಿಯ ಪಕ್ಕ ದೊಡ್ಡತ್ತೆ ಕುಂತಿದ್ದಳು. ಬಾಯಿ ತೆರೆಯುವಷ್ಟರಲ್ಲೇ ಅಜ್ಜಿ - "ತಮಾ ಕೋಣ ಸರೀ ಹತ್ತಿದ್ದಾ?? ಇವತ್ತು ಎಷ್ಟ್ ಎಮ್ಮೆ ಬಂದಿತ್ತಡಾ??" ಎಂದಳು. "ಸರೀ ಹತ್ತಿದ್ದೇ.. ನಮ್ಮನೆದೊಂದೇ ಎಮ್ಮೆಯಡಾ ಇವತ್ತು" ಎಂದೆ. ಮುಂದುವರಿಸಿ "ನಿಂಗೆಂತಾ ಆತು?" ಎಂದೆ.

"ತಮಾ ನನ್ ಕಾಲ ಮುಗತ್ತೋ... ದೇವ್ರು ತಗಂಡ್ ಹೋದ್ರೆ ಸಾಕು" ಎಂದಳು ಅಜ್ಜಿ. 
 
 ಯಾವಾಗಲೂ ಅಜ್ಜಿ ಮಲಗಿದ್ದರೆ ಖುಶಿಯಾಗುವ ನನಗೆ ಆ ದಿನ ಯಾಕೋ ’ಪಾಪ’ ಅನ್ನಿಸಿತು. ಅಜ್ಜಿ ಸತ್ತರೆ.... ತುಪ್ಪ ಬೆಣ್ಣೆಗೆ ಒದ್ದಾಡಬೇಕಿಲ್ಲ.... ಮನೆಯ ಎಲ್ಲರೂ ಜೊತೆಗೆ ನೆಂಟರೂ ಅವರ ಮಕ್ಕಳೂ ಬರ್ತಾರೆ.... ಅವರೊಡನೆ ಆಟ ಆಡಬಹುದೆಂಬ ಕಲ್ಪನೆ ಒಮ್ಮೆ ಮನದಲ್ಲಿ ಮೂಡಿತಾದರೂ ಮರುಕ್ಷಣವೇ ಯಾಕೋ ಅಜ್ಜಿಯ ಆ ಮುಖ ನೋಡಿ ಯಾಕೋ ಏನೋ ”ಪಾಪ’ ಅನ್ನಿಸಿತು.

ಅಜ್ಜಿಯ ಆ ಸುಕ್ಕು ಕೆನ್ನೆಯ ಮೇಲೊಂದು ಮುತ್ತಿಟ್ಟು "ಅಜ್ಜಿ ನೀ ಹೋದ್ರೆ ನಂಗೆ ತುಪ್ಪ ಬೆಣ್ಣೆ ಕೊಡ್ವವು ಯಾರೇ?" ಎಂದಾಗ ನನ್ನ ಕಣ್ಣು ನೀರಾಡಿತ್ತು. ಅಷ್ಟು ಹೊತ್ತಿಂದ ಪಕ್ಕದಲ್ಲೇ ಕುಂತಿದ್ದ ಅತ್ತೆ ಸರ್ರನೆ ಎದ್ದು ಹೋದಳು.


(ಹಿಂದೊಮ್ಮೆ ಗೀಚಿದ್ದು - ದಿನಾಂಕ - ಜನವರಿ ೨೧, ೨೦೧೦) 

ದಮ್ಡಿ ರಾ೦ ಭಟ್ರು

ವಿಷ್ಣು ಭಟ್ಟರ ಇನ್ನೊಂದು ಕೃತಿ


ರಾಂ ಭಟ್ಟರಿಗೆ ಪಿತ್ರಾರ್ಜಿತ ಒಂದು ಚೂರು ತೋಟವಿದ್ದರೂ ಅವರ ಬಾಳುವೆಯೆಲ್ಲ ಸುತ್ತುಮುತ್ತಲಿನ ಊರುಗಳಲ್ಲಿ ನಡೆಯುವ ಕಾರ್ಯ, ಅಲ್ಲಿ ಯಜಮಾನರಿಗೆ ದಕ್ಷಿಣೆ ಕೊಡಲು ಇರುವ ತಾಕತ್ತು - ಇವುಗಳನ್ನೇ ಅವಲಂಬಿಸಿದೆ. ಅವರು ಧಾಂಡಿಗರಾಗಿ ಕಂಡರೂ ಅವರದು ಕೆಲಸಕ್ಕೆ ಬಾಗದ ಮೈ. ಬ್ರಾಹ್ಮಣರಿಗೆ ಊಟ, ದಕ್ಷಿಣೆ ಕೊಡುವ ರೂಢಿ ಇನ್ನೂ ಇರುವಾಗ ಅವರು ಕೆಲಸ ಮಾಡಲೇಬೇಕೆಂದು ಕಾಯದೆಯಿದೆಯೆ? ಕರೆಯಲೀ ಕರೆಯದೇ ಇರಲಿ  ಏಷ್ಟೇ ದೂರಾದರೂ - ಹೊಗೆ ಕಂಡು - ನಡೆದು ಹೋಗುವ ಶಕ್ತಿ, ಅಲ್ಲಿ ಎಲ್ಲರಿಗಿಂತ ಜೋರಾಗಿ ತಮಗೆ ಬರುವ ಒಂದೆರಡು ಮಂತ್ರಗಳನ್ನು ಆರ್ಭಟಿಸುವ ಸಾಮರ್ಥ್ಯ, ಭಟ್ಟರಿಗೆ ದೇವರು ಕೊಟ್ಟಿದ್ದಾನೆ. ಪಂಜೆ ಹಚ್ಚಿಕೊಂಡು ಭಸ್ಮದಿಂದ ದೇಹವನ್ನು ಅಲಂಕರಿಸಿ ಅವರು ಕುಳಿತರೆ ಥೇಟು ಶಂಕರಾಚಾರಿಗಳೇ. ಬ್ರಹ್ಮತೇಜ ಅವರಿಗಿದ್ದಷ್ಟು ನಮ್ಮೂರಿನಲ್ಲಿ ಯಾರಿಗೂ ಇಲ್ಲ. ಅಂತೆಯೇ ಅವರು ಕರೆಯದೇ ಹೋದಕಡೆಗೂ ಮರ್ಯಾದೆ ಹೊಂದಿ ಬರುತ್ತಾರೆ. 

ಕಳೆದ ಆರೆಂಟು ವರ್ಷಗಳಿಂದಲೂ ಭಟ್ಟರು ಒಂದೇ ಜೋಡಿ ಅಂಗೋಸ್ತ್ರದಿಂದ ತಮ್ಮ ಬ್ರಾಹ್ಮಣ್ಯ ನಡೆಯಿಸುತ್ತಿದ್ದಾರೆ. ಮನೆಯವರಿಗೂ ಹಾಗೆ. "ಇಷ್ಟು ಗಳಿಸಿಟ್ಟು ಯಾರಿಗೆ.....?" ಎಂದು ಅವರ ಹೆಂಡತಿ ಗೊಣಗಿದರೆ "ಅಬ್ಬೇ ಮನೆಗೆ ಒಯ್ದು ಹಾಕಲೇ?" ಎಂದು ಅಬ್ಬರಿಸುತ್ತಾರೆ. ಮಕ್ಕಳಂತೂ ತಂದೆಯನ್ನು ಕಂಡರೆ ಥರಥರ ನಡುಗುತ್ತಾರೆ. ಅವರು ಏನಾದರೂ ತಿನ್ನುತ್ತಿದ್ದಾಗ ಮಕ್ಕಳು ಬಂದು "ಅಪ್ಪಯ್ಯಾ, ನಂಗೇ..." ಅಂದರೆ ತೀರಿತು. "ಹಾಳು ಹೊಟ್ಟೆಯವರೆ, ನಾನು ಊರೂರೆಲ್ಲಾ ತಿರುಗಾಡಬೇಕು, ನಿಮಗಾಗಿ ಸಂಪಾದಿಸಿ ತರಬೇಕು. ಅದೆಲ್ಲ ತಿಳಿಯುವುದೇ ಇಲ್ಲ ನಿಮಗೆ. ನಾನು ಏನು ತಿಂದರೂ ಅದು ನಿಮಗೆ ಬೇಕು. ನಿಮ್ಮನ್ನು ಹುಟ್ಟಿಸಿದ ಕಷ್ಟ, ಸಾಕಿದ ತ್ರಾಸು,.... ಇದೆಲ್ಲ..." ಎಂದು ಶುದ್ಧವಾಗಿ ಬೈಯುತ್ತಾರೆ. ಮಕ್ಕಳು ಕುಯ್ ಅನ್ನದೇ ಅವರು ತಿನ್ನುವುದನ್ನೇ ನೋಡುತ್ತ ಕುಳಿತುಕೊಳ್ಳುತ್ತಾರೆ. ತಿಂದ ನಂತರ ಪಾತ್ರೆಯನ್ನು ಮಕ್ಕಳ ಕೈಯಲ್ಲಿ ಕೊಟ್ಟು "ತೊಳೆಯಿರಿ" ಎ೦ದು ಹೊರಡುತ್ತಾರೆ. ಮಕ್ಕಳು ಆ ಪಾತ್ರೆಯ ಕಲಾಯಿ ಹೋಗುವಂತೆ ನೆಕ್ಕುತ್ತಾರೆ. ಅವರ ಕಚ್ಚಾಟ ತಡೆಯಲು ಇದನ್ನೆಲ್ಲ ಕಂಡರೂ ಕಾಣದೇ ಕೆಲಸ ಮಾಡುತ್ತಿದ್ದ ತಾಯಿ ಬರಬೇಕು. 

ನಮ್ಮೂರಿನ ಮಕ್ಕಳಿಗೆ ಭಟ್ಟರ ಕಂಡರೆ ನಗೆ. "ಭಟ್ಟರೆ, ಇಂದು ಆಚೆಯ ಕೇರಿಯಲ್ಲಿ ಒಂದು ಬೊಜ್ಜ. ನಿಮಗೆ ಗೊತ್ತೇ ಇಲ್ಯ ನೋಡ್ತೆ?" ಎಂದು ಚೇಷ್ಟೆ ಮಾಡುತ್ತಾರೆ. ಒಮ್ಮೆಯಂತೂ ರಾತ್ರಿಯಲ್ಲಿ ಭಟ್ಟರನ್ನು ಹೊಳೆಯ ಆಚೆಗೆ ಯಾವುದೋ ಕಾರ್ಯವಿದೆಯೆಂದು ಹೇಳಿ ಸೂಡಿಯ ಬೆಳಕಿನಲ್ಲಿ ಅಟ್ಟಿದ್ದರು.
ಭಟ್ಟರ ಹತ್ತಿರ ಹತ್ತಿಪ್ಪತ್ತು ಸಾವಿರ ರೂಪಾಯಿಗಳಿರಬೇಕೆಂದು ಊರಿನವರ ಅಂದಾಜು. ಅದನ್ನು ಅವರು ಮನೆಯವರಿಗೂ ತಿಳಿಯದ೦ತೇ ಹುಗಿದಿಟ್ಟಿರಬೇಕು. ಗ್ರಾಮದ ವರ್ಗಣಿ ಗಿರ್ಗಣಿ ಕೊಟ್ಟು ಭಟ್ಟರಿಗೆ ಗೊತ್ತೇ ಇಲ್ಲ. 
 ಬಾಳುವೆಗಿಂತ ಸಾವೇ ಚೆಂದವೆಂದು ಹೇಳುತ್ತಾರಲ್ಲ. ಭಟ್ಟರ ಮರಣವೂ ಹೃದಯಂಗಮವಾಗಿದೆ.

ಒಂದು ರಾತ್ರಿಯಲ್ಲಿ ಯಾರೋ ಮುಕರಿಗಳು ಹಾನ ತೆಗೆದು ಹಾನದ ಕೊಟ್ಟೆಯನ್ನು ಹೊಳೆಯಲ್ಲಿ ತೇಲಿ ಬಿಟ್ಟಿದ್ದರು. ಭಟ್ಟರು ಹೊಳೆದಂಡೆಯ ಮೇಲೆ ನಿತ್ಯಕರ್ಮ ಮಾಡುತ್ತಿದ್ದಂತೇ ತೋರುತ್ತದೆ. ಹಾನದ ಕೊಟ್ಟೆಯಲ್ಲಿ ಒಂದು ದಮ್ಡಿಯನ್ನಾದರೂ ಹುಗಿದಿಡುತ್ತಾರೆಂಬುದು ಗೊತ್ತಿದ್ದ ವಿಷಯ. ಸ್ಮಶಾನಗಳ ಬಿಡಿಗಾಸು, ಬಿಲ್ಲಿಗಳನ್ನೂ ಬಿಡದ ಭಟ್ಟರು ಹಾನದ ಕೊಟ್ಟೆಗೆ ಹೆದರುತ್ತಾರೆಯೇ? ಈಜು ಚೆನ್ನಾಗಿ ಬರದಿದ್ದರೂ ಹೊಳೆಗೆ ಇಳಿದರು. ಹಾನದ ಕೊಟ್ಟೆಯ ಕಡೆಗೆ ಹೇಗೋ ಕಾಲು ಬಡಿಯುತ್ತ ನಡೆದರು. ಆದರೆ ಕೊಟ್ಟೆಯೊಳಗಿನ ದಮ್ಡಿಯ ಧ್ಯಾನದಲ್ಲಿ ಭಟ್ಟರಿಗೆ ತಾನು ಎಲ್ಲಿ ಬಂದೆನೆಂಬುದೇ ಗೊತ್ತಾಗಲಿಲ್ಲ. ಅಂತೂ ಕೊಟ್ಟೆ ಕೈಗೆ ಹತ್ತಿತು. ಅದರೊಳಗಿನ ಸಗಣಿಯ ಕಟ್ಟೆಯನ್ನು ಕದಡಿ ಒ೦ದು ದಮ್ಡಿಯನ್ನು ದೊರಕಿಸಿಯೇ ಬಿಟ್ಟರು. ಮನುಷ್ಯನಿಗೆ ಒಂದು ಉದ್ದೇಶ ಸಾಧಿಸುವವರೆಗೆ ಶಕ್ತಿ ಎಲ್ಲಿಂದ ಬರುತ್ತದೆಯೋ? ಮರುಕ್ಷಣವೇ ಹಿಗ್ಗಿನ ಜತೆಗೆ ದಣಿವುಂಟಾಗುತ್ತದೆ. ಈಜು ಬರದೇ ಈಜಿ, ದಮ್ಡಿ ಸಂಪಾದಿಸಿದ ಭಟ್ಟರು ಹೊಳೆಯ ನಡುವೆ ಕೈಕಾಲು ಸೋತು ಮುಳುಗಿದರು.

ಮರುದಿನ ಎರಡು ಮೈಲು ಕೆಳಗೆ ದಂಡೆಯ ಮೇಲೆ ಭಟ್ಟರ ಹೆಣ ಸಿಕ್ಕಿತು. ಶೋಧ ಮಾಡಲಾಗಿ ಬಲಗೈಯಲ್ಲಿ ಒಂದು ದಮ್ಡಿಯನ್ನು ಹೆಣವು ಭದ್ರವಾಗಿ ಹಿಡಿದುಕೊಂಡಿದ್ದು ಕಂಡುಬಂತು.!! 
(ಹಿಂದೊಮ್ಮೆ ಭಟ್ಟಿ ಇಳಿಸಿದ್ದು - ದಿನಾಂಕ - ಸಪ್ಟೆಂಬರ್ ೨೦, ೨೦೦೯ )

ಶಿವರಾಂ ಭಟ್ಟರ ಕಾಯಿ ಕೊಯ್ಲು

ಪೀಠಿಕೆ :
ಸಂಬಂಧದಲ್ಲಿ ದಾಯಾದಿ ದೊಡ್ಡಪ್ಪ ದಿll ವಿ. ಜಿ. ಭಟ್ಟ, ಭಡ್ತಿ  ಇವರನ್ನು ಕಣ್ಣಾರೆ  ಕಂಡು ಮಾತಾಡಿಸುವ ಯೋಗವಂತೂ ಕೂಡಿ ಬರಲಿಲ್ಲ ನನಗೆ.  ಆದರೂ ಜೀವನ ಚಿತ್ರಗಳ ಚಿತ್ರಿಸುವ ಅವರ ಮೋಡಿಗೆ ಮಾರು ಹೋಗಿದ್ದೇನೋ ಸತ್ಯ.
ಮುನ್ನುಡಿಯಲ್ಲಿ ವಿಷ್ಣು ಭಟ್ರು ಹೇಳುತ್ತಾರೆ
  "ನಮ್ಮ ಜಿಲ್ಲೆಯ ಮಾತೆತ್ತಿದೊಡನೆಯೇ ಹೊರಗಿನವರು ನಮ್ಮ ಸೃಷ್ಟಿ ಸೌಂದರ್ಯವನ್ನು ಬಣ್ಣಿಸಬಹುದು. ನಿಜ, ಪಂಪನನ್ನು ಹುಚ್ಚು ಹಿಡಿಸಿದ ನಾಡೂ ನಮ್ಮದು.ಆದರೆ ನನಗೆ ನಿಸರ್ಗಕ್ಕಿಂತ ಮಾನವ ಹೃದಯಸೌಂದರ್ಯ - ಕುರೂಪಗಳೇ ಹೆಚ್ಚು ಸೇರುತ್ತವೆ. ಆದ್ದರಿಂದ ಈ ಸಂಗ್ರಹದಲ್ಲೆಲ್ಲೂ ಸೂರ್ಯ ಚಂದ್ರರು ಮೂಡಿಲ್ಲ; ಹಕ್ಕಿ ಹಾಡಿಲ್ಲ; ಹಸಿರು ಹೊಳೆದಿಲ್ಲ."
ನಾನು ಮುಂಬಯಿಯಲ್ಲಿದ್ದಾಗ ಇವರ ಕೃತಿಗಳಿಗಾಗಿ ಬಹಳ ಹುಡುಕಿದ್ದೇನೆ. ಮಾಟುಂಗಾದ ವಾಚನಾಲಯದಲ್ಲಿ ತಲಾಶಿ ಮಾಡಿದ್ದೇನೆ. ಆದರೂ ಇವರ ಕೃತಿಗಳನ್ನು ಸಂಪಾದಿಸಲಾಗಲಿಲ್ಲ. ಅಜ್ಜಿಯ ಕಾಲದಿಂದಲೂ ಮನೆಯಲ್ಲಿದ್ದ ಒಂದೇ ಒಂದು ಪುಸ್ತಕವೇ ಅವರ ನೆನಪಿಗಾಗಿ ನನ್ನಲ್ಲಿರುವ ಆಸ್ತಿಯೆನ್ನಬೇಕು. ಅವುಗಳಲ್ಲಿ ವಂದು ಈ "ಶಿವರಾಂ ಭಟ್ಟರ ಕಾಯಿ ಕೊಯ್ಲು"

 ಷ್ಟೇ ಸ್ವಾತಂತ್ರ್ಯ ವೃತ್ತಿಯವರಾದರೂ ತೆಂಗಿನ ತೋಟದ ಮಟ್ಟಿಗೆ ಬ್ರಾಹ್ಮಣರು ಶೂದ್ರರಿಗೆ ಋಣಿಯಾಗಲೇಬೇಕು. ಸ್ವತಃ ಕುಳಿ ತೆಗೆದು ಸಸಿ ನೆಡಬಹುದು; ಸ್ವತಃ ನೀರು ಹಾಕಬಹುದು. ಅವುಗಳಿಗೆ ಬೇಕಾಗುವ ಗೊಬ್ಬರ ತೆರಕುಗಳನ್ನೂ ತಂದು ಹಾಕಬಹುದು. ಕಾಯಿಯನ್ನು ಬೇಕಾದರೆ ಕುಮಠೆಗೆ ಹೊತ್ತುಕೊಂಡು ಹೋಗಿ ಮಾರಬಹುದು. ಆದರೆ ಮರ ಹತ್ತಿ ಕೊಯ್ಯುವುದು ಮಾತ್ರ ಬ್ರಾಹ್ಮಣರಿಗೆ ಸಾಧ್ಯವಿಲ್ಲ; ಎಷ್ಟೇ ಶ್ರಮಜೀವಿ ಬ್ರಾಹ್ಮಣನಿಗೂ ಸಾಧ್ಯವಿಲ್ಲ.

ನಮ್ಮ ಕೇರಿಯ ಪುಟ್ಟ ಭಟ್ಟರು ಗಡ್ದ ಬೋಳಿಸಿಕೊಳ್ಳುವುದರಿಂದ ಹಿಡಿದು ಗುಡ್ಡ ಕಡಿಯುವ ಕೆಲಸಗಳನ್ನೂ ಸ್ವತಃ ಮಾಡುತ್ತಾರೆ. ಆದರೂ ಅವರ ಮನೆಯ (ತೆಂಗಿನ) ಕಾಯ್ಕೊಯ್ಲಿಗೂ ’ಹರಿ’ಯೇ ಬರಬೇಕು. ಭಟ್ಟರು ಅಡಿಕೆಮರಗಳ ಮೇಲೆ ಹಾರಾಡುತ್ತಾರೆ. ಆದರೆ ಒಂದೊಂದಾಗಿ ತೆಂಗಿನ ಮರಗಳನ್ನು ಹತ್ತಿ ಕೊಯ್ಯುವುದು ಅವರಿಗೂ ಅಸಾಧ್ಯ.


ಹರಿ ನಮ್ಮ ಮೂರು ನಾಲ್ಕು ಕೇರಿಗಳ ಕಾಯ್ಕೊಯ್ಲು ಮಾಡುತ್ತಾನೆ. ಮರಕಸಬಿನಿಂದಲೇ ಅವನ ಜೀವನ. ಮರ ಹತ್ತುವುದರಲ್ಲಿ ಅವನು ಥೇಟ್ ಸೌಳಿ. ಕಡ್ಡಿಯಂಥ ಆಳು ಅವ. ಬೆರಳಿನಷ್ಟು ಸಪುರ ಹೆಗೆಯ ಮೇಲೂ ಅವನು ಹರೆದಾಡುತ್ತಾನೆ. ದೊಡ್ಡ ದೊಡ್ಡ ಮರಗಳ ಭೀತಿಯಂತೂ ಅವನಿಗೆ ಇಲ್ಲವೇ ಇಲ್ಲ. ಅಡಿಕೆಗೆ ಮದ್ದು ಹೊಡೆಯುವಾಗ, ಕೊಟ್ಟೆ ಕಟ್ಟುವಾಗ, ಕೊಯ್ಯುವಾಗ ಅವನು ಮರದಿಂದ ಮರಕ್ಕೆ ಸುಲಭವಾಗಿ, ಹಗುರಾಗಿ, ಹಾರುವುದನ್ನು ನೋಡಿದರೆ ಮಾನವರ ಮೂಲ ಮಂಗನೆಂಬ ಮಾತು ಸ್ಪಷ್ಟವಾಗುತ್ತದೆ. ಮಾವಿನಕಾಯಿ ಆಗಲು ಶುರುವಾದ ಕೂಡಲೇ "ಉಪ್ಪಿನಕಾಯಿಗೆ ಮಿಡೀ ಕೊಯ್ಕೊಡೋ ಹರಿ" ಎಂದು ಕರೆಯದವರಿಲ್ಲ. 


ನಮ್ಮೂರಿನಲ್ಲಿ - ಹೆಚ್ಚಾಗಿ ನಮ್ಮ ಕೆಲವು ಕೇರಿಗಳಲ್ಲಿ - ಹೀಗೆ ತನ್ನ ಕೆಲಸದಿಂದ ಪ್ರಸಿದ್ದನಾದ ಹರಿಗೆ ’ತನ್ನ ಹೊರತೂ ಇವರಿಗೆ ಬೇರೆಯವರು ಗತಿಯಿಲ್ಲ’ವೆಂದು ತೋರಿತೋ ಏನೋ. ಏಳು ಮರಗಳ ಕಾಯಿ ಕೊಯ್ದರೆ ಒಂದು ಕಾಯಿ ಅವನಿಗೆ ಸಂಬಳ ಇದ್ದುದನ್ನು ನಿಲ್ಲಿಸಿ ಐದು ಮರಗಳಿಗೆ ಒಂದು ಕಾಯಿ ಕೊಡಬೇಕೆ೦ದು ಕೇಳಹತ್ತಿದನು. "ಜೀವಮಾನವೂ ಕಷ್ಟ. ಪಾಪ ಹಾಂಗೇ ತಗಳ್ಲಿ" ಅಂದರು ಕೆಲವು ಉದಾರ ಬುದ್ಧಿಯ ತೋಟಿಗರು. "ಹೋಗ್ಲೋ, ಕಾಯ್ಧಾರ್ಣ್ಯೂ ಬ೦ಜು, ಹಾಂಗೇ ಕೊಟ್ರೂ ದೊಡ್ದಲ್ಲ". ಅಂದರು ಕೆಲವರು. "ಇಷ್ಟ್ ದಿನ ಹೇಗೇ ಕೊಟ್ಕತ್ಬಂದಾಯ್ದು. ಈಗ ಹೆಚ್ಮಾಡೂಲೆ ಸಾಧ್ಯವೇ ಇಲ್ಲೆ." ಎಂದು ತಕರಾರು ಮಾಡಿದವರೂ ಕಡಿಮೆ ಇಲ್ಲ.


ನಮ್ಮ ಕೇರಿಯ ಶಿವರಾಂ ಭಟ್ಟರಿಗಂತೂ ಹರಿಯು ಐದು ಮರಕ್ಕೆ ಒಂದು ಕಾಯಿ ಮಾಡಿದ್ದು ಸೇರಲೇ ಇಲ್ಲ. ತಮಗೆ ಉಪ್ಪಿನಕಾಯಿಗಾಗಿ ಅವನು ’ಮಾಯ್ಮಿಡಿ’ ಕೊಯ್ದು ಕೊಟ್ಟಿದ್ದಿಲ್ಲವೆಂಬ ಕೊರಗೂ ಬೇರೆ ಇತ್ತು. ಶಿವರಾಂ ಭಟ್ಟರ ಮನೆಯ ಮಾವಿನ ಮರದ ಸೌಳಿಗೆ ಹೆದರಿ ಹರಿಯು ಕೊಯ್ದುಕೊಟ್ಟಿದ್ದಿಲ್ಲ. ಆದರೆ ಅವನಿಗೆ ಭಟ್ಟರ ಮೇಲೆ ಯಾವ ವೈರವೂ ಇತ್ತಿಲ್ಲ. 


 ಶಿವರಾಂ ಭಟ್ಟರು ಹರಿಯ ಹೊಸ ಲೆಕ್ಕಕ್ಕೆ ಒಪ್ಪಿಕೊಳ್ಳದೇ ತಾವೇ ಕಾಯಿ ಕೊಯ್ದುಕೊಳ್ಳುವೆನೆಂದು ಸಾರಿದರು. ಕಾಯಿಗೆ ಧಾರಣೆಯೂ ಬ೦ದಿತ್ತು. ಹರಿಗೆ ಒಂದು ದಿನಕ್ಕೆ ಮೂರು ರೂಪಾಯಿ ಸಂಬಳ ಸಿಗುವುದೂ ಅವರಿಗೆ ಸರಿ ದೋರಲಿಲ್ಲ. ತಾವು ಕೆಲಸದಲ್ಲಿ ಗಟ್ಟಿಗರೆಂಬ ಹೆಮ್ಮೆ, ಹೊಸದಾಗಿ ಮರ ಕಸುಬು ಕಲಿತ ಗರ್ವ ಅವರಿಂದ "ನನ್ನ ಹತ್ತಿರ ನೂರು ತೆಂಗಿನ ಮರದ ಕೊಯ್ಲು ಮಾಡಲು ಸಾಧ್ಯವಿಲ್ಲವೇ?" ಎಂದು ಕೇಳಿಸಿದವು. 

ಅಂತೂ ಮುಂದಿನ ಕೊಯ್ಲಿನಲ್ಲಿ ತಾವೇ ತಳೇಬಳ್ಳಿ ಹಾಕಿದರು. ಆರೆಂಟು ಮರಗಳ ಕೊಯ್ಲು ಮುಗಿಸಿ ಚಹ ಕುಡಿದು ಉತ್ಸಾಹದಿ೦ದ ನೆರೆಮನೆಗೆ ಹೋಗಿ "ಹೋಯ್ ಭಟ್ರೆ, ಯಾನೇ ಕೊಯ್ಲೆಲ್ಲಾ ಮುಗೀಸ್ತೆ ಅಂದೆ!" ಅಂದು ಬಂದರು. ಮತ್ತೆ ಮರ ಹತ್ತಲು ಸುರು ಮಾಡಿದರು. ಚಹದ ಹುರುಪಿನಿಂದ ಒಂದೆರಡು ಮರ ಮುಗಿಯಿತು. ಮೂರನೆಯ ಮರ ಅರ್ಧಕ್ಕೆ ಹತ್ತುವುದರೊಳಗಾಗಿ ಸಾಕೋ ಬೇಕಾಯಿತು. ಕೀಲುಗಳೆಲ್ಲ ತಪ್ಪಿ ಹೋಗುವಂತೇ ಅನ್ನಿಸಿತು. ಆದರೂ ಬಿಡಲಿಲ್ಲ. ಹೇಗೋ ತುದಿಗೆ ಮುಟ್ಟಿದರು. ಹೆಡೆಯ ಮೇಲೆ ಕುಳಿತು ’ಉಶ್’ ಎಂದು ವಿಶ್ರಾಂತಿ ತೆಗೆದುಕೊಂಡರು. ಅಲ್ಲಿಯೇ ಒ೦ದು ಕಪ್ ಚಹ ಯಾರಾದರೂ ತಂದು ಕೊಟ್ಟಿದ್ದರೆ ಸುಖವಾಗಿ ಇಳಿಯುತ್ತಿದ್ದೆನೆಂದು ಅಂದುಕೊಂಡರು. ಬೆಳೆದ ಕಾಯಿಗಳನ್ನು ಕೊಯ್ದಾಯಿತು. ’ಇನ್ನೊಂದು ಸಲ ಈ ಮರ ಹತ್ತಿ, ಆಗ ಬೆಳೆಯುವ ಈ ಸೀಯಾಳ ಕೊಯ್ಯುವುದು .... ಬಹಳ ತ್ರಾಸಿನ ಕೆಲಸ. ಸೀಯಾಳವನ್ನೇ ಕೊಯ್ದು ಕುಮಟೆಗೆ ಸಾಗಿಸಿದರೆ ಹೇಗೆ?’ ಎಂಬ ವಿಚಾರ ಮೂಡಿತು. ಹಾಗೇ ನಿಶ್ಚಯಿಸಿ ಸೀಯಾಳಗಳನ್ನೂ ಉದುರಿಸಿದರು. ತೀರ ಎಳೇ ಸೀಯಾಳಗಳು ಬೀಳುವ ಮುಂಚೇ ಒಡೆದು ಹೋದವು ! ಬಿದ್ದ ಕಾಯಿಗಳು ಒಡೆಯುವ ಸದ್ದು ಕೇಳಿ ಆಚೆಯ ತೊಟದಲ್ಲಿ ಕಾರಿಗೆ ಬರಗುತ್ತಿದ್ದ ಸುಬ್ರಾಯ್ ಭಟ್ಟರು "ಹ್ವಾಯ್. ಶಿವ್ರಾಂ ಭಟ್ರೆ, ಏನು ಸೀಯಾಳನೇ ಕೊಯ್ತ್ರಿ? " ಅಂದರು. "ಬೇಕು ಹೇಳೇ ಕೊಯ್ದೆ." ಅಂದರು ಭಟ್ಟರು. ಅವರಿಗೆ ಇಳಿಯುವ ಮನಸ್ಸೇ ಬಾರದು. ಅಲ್ಲೇ ಹೆಡೆಯ ಮೇಲೇ ಕುಳಿತು ವಿಶ್ರಮಿಸುತ್ತಿರುವಾಗಲೇ "ಕೂ ಹೂಯ್......... ಉಂಬ್ಲಾತ್ರೋ" ಎಂದು ಮನೆಯಿಂದ ಕರೆಯಬಂದಿತು. ಅಂತೂ ಇಂತೂ ಇಳಿದರು 


ಸೀಯಾಳಗಳನ್ನು ಕುಮಟೆಗೆ ಒಯ್ಯುವ ಮುಂಚೆ ಎಲ್ಲಾ ಮರಗಳ ಕೊಯ್ಲನ್ನು ಮುಗಿಸಬೇಕಲ್ಲ? ಮುಂದೇನು ಮಾಡುವುದು? ಸ್ವತಃ ಹತ್ತುವದಂತೂ ಸಾಧ್ಯವಿತ್ತಿಲ್ಲ. ಒಂದು ಉಪಾಯ ಹೊಳೆಯಿತು. ಎಲೆಬಳ್ಳಿಗೆ ತಂದಿದ್ದ ಏಣಿಯನ್ನು ತಂದು ತೆಂಗಿನ ಮರಕ್ಕೆ ಸಾಚಿದರು. ಇದನ್ನೂ ನೆರೆಮನೆಯ ಗ್ರಾಸ್ತ ನೋಡುತ್ತಿರಬೇಕೆ ? "ಹ್ವಾಯ್ ಭಟ್ರೆ, ಯೇನು ತೆಂಗಿನ ಮರಕ್ಕೆ ಏಣೀ ಸಾಚ್ದ್ರಿ?" ಅಂದನು. "ಅಲ್ಲ ಭಟ್ರೆ, ಈ ತೆಂಗಿನ ಮರಾನೂ ಅಡ್ಕೇ ಮರದಷ್ಟೇ ಎತ್ತರ ಮಾಡಿದ್ರೆ ದೇವ್ರು..." ಅಂದರು ಶಿವರಾಂ ಭಟ್ಟರು. ನೆರೆಮನೆಯ ಗ್ರಾಸ್ತನಿಗೆ ನಗೆ ಬಂತು. "ಅಥ್ವಾ ತೆಂಗ್ನ ಮರ್ದಷ್ಟೇ ಎತ್ರ ಮನ್ಶ್ನೂ ಮಾಡಿದ್ದ್ರೆ ಮತ್ತೂ ಚೊಲೋ ಆಗ್ತಿತ್ತಿಲ್ಯ ?" ಎಂದು ಕೇಳಿದರು. "ಮಜಾ ಮಾಡ್ತ್ರೋ ನೋಡ್ತೆ ?" ಅಂದರು ಇವರು.


 ಏಣಿ ತೆಂಗಿನ ಮರದ ತುದಿಗೆ ಮುಟ್ಟುವುದುಂಟೇ? ಮರುದಿನ ಶಿವರಾಂ ಭಟ್ಟರು ತೆಂಗಿನಮರಕ್ಕೆ ಏಣಿ ಸಾಚಿದ ಸುದ್ದಿ ಕೇರಿ ತುಂಬ ಹಬ್ಬಿತು. ಭಟ್ಟರು ಉಳಿದ ಮರಗಳ ಕೊಯ್ಲು ಮಾಡಲಾಗದೇ, ಒಂದೇ ಮರದ ಸೀಯಾಳ ಕುಮಟೆಗೆ ಒಯ್ಯಲಾಗದೇ ( ಕೇವಲ ಆರೆಂಟು ಸೀಯಾಳ ಎಂದು) ಫಜೀತಿಯಲ್ಲಿ ವಿಚಾರಿಸಹತ್ತಿದರು. 

ಕೇರಿಯ ಕೆಲವು ತುಂಟರಿಗೆ ಇಷ್ಟೇ ಸಾಕಯಿತು. ಒಬ್ಬೊಬ್ಬರಾಗಿ ಒಂದೊಂದು ಸಲಹೆ ಕೊಡಲು ಬಂದರು. 

"ಏನು ಶಿವರಾಂ ಭಟ್ರೆ, ತೆಂಗಿನ ಮರಕ್ಕೆ ಏಣಿ ಸಾಚ್ದ್ರಡ?.... ಏಣೀ ಸಾಚೂದ್ಕಿಂತ ಕಲ್ಹೊಡ್ದು ಮಾವಿನ ಮಿಡೀ ಉದರ್ಸ್ದ ಹಾಗೆ ಕಾಯ್ನೂ ಉದ್ರ್ಸಿ ಹಾಕ್ದ್ರೆ ಹೆಂಗೆ?"... 
"ಅಲ್ದ್ರ, ಅಷ್ಟೆಲ್ಲಾ ಕಷ್ಟಪಡೂದ್ ಎಂತಕ್ಕೆ?ನಿಮ್ಗೆ ಯಾನು ಒಂದು ಸಸಾರ್ದ ಉಪಾಯ ಹೇಳ್ತೆ ಕೇಳಿ. ಕಾಯಿ ಬೆಳ್ದ ಕೂಡ್ಲೇ ಮರಾನೇ ಕಡ್ದು ಕೆಡ್ಗಿ ಹಾಕ್ದ್ರೆ, ನೆಲ್ದ ಮೇಲೆ ಕೂತ್ಗಂಡೇ ಕಾಯ್ ಕೊಯ್ಲಕ್ಕು! ಅಲ್ದಾ?"
ಎಂದು ಸಲಹೆಗಳನ್ನು ಕೊಡುತ್ತಾ ಅಂಗಳದಲ್ಲಿ ರಾಶಿ ಹಾಕಿದ ಸೀಯಾಳಗಳನ್ನು ತೀರಿಸಹತ್ತಿದರು.ಸೀಯಾಳಗಳನ್ನು ತಿನ್ನಬೇಡೀ ಎನ್ನಲೂ ಆಗದೇ, ತನ್ನ ಚೇಷ್ಟೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳದೇ ಇರಲೂ ಆಗದೇ, " ಓ ಹೌದನೇ, ಒಂದಿಷ್ಟು ಗೊಜ್ ಬೆಲ್ಲ ತಕಂಬಾ. ಸೀಯಾಳ ತಿನ್ತೋ ಯಂಗೋ" ಎಂದು ಗೊಜ್ಬೆಲ್ಲ ತರಿಸಿ ಎಲ್ಲರ ಜತೆಗೆ ತಾವೂ ಸೀಯಾಳ ತಿಂದು ಹಾರಿಸಿದರು.!

ಅವರ ಫಜೀತಿ ಕೇರಿಯವರಿಗೆ ಗೊತ್ತಾಯಿತು. ಹರಿಗೆ ತಮ್ಮ ಮನೆಯ ಕಾಯಿಕೊಯ್ದು ಕೊಡುವುದು ಬೇಡವೆಂದು ಹೇಳಿಬಿಟ್ಟಿದ್ದರು. ತಮ್ಮ ಹತ್ತರ ಕೊಯ್ಯಲು ಸಾಧ್ಯವಿಲ್ಲವೆಂಬುದನ್ನು ಕಲಿತಿದ್ದರು. ಹರಿಯನ್ನು ಮತ್ತೆ ಕರೆದು "ಕಾಯಿ ಕೊಯ್ದುಕೊಡು" ಎಂದು ಹೇಳುವುದು ಹೇಗೆ? ಒಮ್ಮೆ ಬೇಡವೆಂದು ಹೇಳಿ ಮತ್ತೆ ದಮ್ಮಯ್ಯ ಅಂದರೆ..... ಆದರೆ ಹರಿಯೇ ಬಂದು ಕೊಯ್ಯುತ್ತೇನೆಂದರೆ ಎಲ್ಲರಂತೇ ೫ ಮರಕ್ಕೆ ೧ ಕಾಯಿ (೪ ಮರಕ್ಕೆ ಬೇಕಾದರೂ ೧ ಕಾಯಿ) ಕೊಡಲು ಅವರು ತಯಾರಾಗಿದ್ದರು. ಸೀಯಾಳ ಬೆಲ್ಲ ತಿಂದು ಬಂದ ಗ್ರಾಸ್ತರಿಗೆ ಇದು ತಿಳಿಯದೇ ಹೋಗಲಿಲ್ಲ 


ಅವರು ತಮ್ಮಷ್ಟಕ್ಕೇ ನಕ್ಕು, ಭಟ್ಟರ ಚೇಷ್ಟೆ ಮಾಡಿದರು. ಕೊನೆಗೆ ಮಾತ್ರ      "ಪಾಪ, ಅವ್ನ ಫಜೀತಿ!" ಅನ್ನದೇ ಹೋಗಲಿಲ್ಲ. ಮರುದಿನ ಅವರು ಹರಿಯನ್ನು ಕರೆದು, ವಿಷಯವನ್ನು ತಿಳಿಸಿ, ಕರೆಯವಿಲ್ಲದೇ ಶಿವರಾಂ ಭಟ್ಟರ ಮನೆಗೆ ಹೋಗಿ ಕಾಯಿ ಕೊಯ್ಯಬೇಕೆಂದೂ - ಅವರು ಕೊಟ್ಟಷ್ಟು ತೆಗೆದುಕೊಳ್ಳಬೇಕೆಂದೂ ಹೇಳಿದರು. ಕತೆಯನ್ನು ಕೇಳಿಕೊಂಡ ಹರಿ ಮೈ ಮೇಲೆ ಕವಳದ ಜೊಲ್ಲು ಚೆಲ್ಲುವಷ್ಟು ನಕ್ಕ. 


ಮರುದಿನ ಭಟ್ಟರ ಮನೆಗೆ ಹರಿಯು ಬಂದು "ನೀವು ತಿಳ್ದಷ್ಟು ಕೊಡಿ." ಅಂದು ಕಾಯಿ ಕೊಯ್ಯಹತ್ತಿದ. ಭಟ್ಟರು ಪಿಟ್ಟೆಂದು ಮಾತಾಡಲಿಲ್ಲ. 


ಸಂಜೆಯ ಮುಂದೆ ಚಕಾರ ಮಾತಾಡದೆ ಐದು ಮರಕ್ಕೆ ಒಂದರಂತೇ ಹಿಡಿದು ತಾವೇ ದೊಡ್ಡ ದೊಡ್ಡ ಕಾಯಿಗಳನ್ನು ಆರಿಸಿಕೊಟ್ಟರು. ಅದರ ನಂತರದ ಎಲ್ಲ ಕೊಯ್ಲುಗಳಿಗೂ ಹರಿಯೇ. 


ಈಗ ನಮ್ಮೂರಿನಲ್ಲಿ ಯಾರಾದರೂ ಆಶೆಗಾಗಿ ತಮ್ಮ ಕೈ ಮೀರಿದ ಕೆಲಸಕ್ಕೆ ಕೈ ಹಾಕಿದರೆ " ಶಿವರಾಂ ಭಟ್ಟರು ತೆಂಗಿನ ಮರಕ್ಕೆ ಏಣಿ ಸಾಚಿದ ಹಾಗೆ..." ಅನ್ನುತ್ತಾರೆ.

(ಹಿಂದೊಮ್ಮೆ ಭಟ್ಟಿ ಇಳಿಸಿದ್ದು - ದಿನಾಂಕ - ಸಪ್ಟೆಂಬರ್ ೯, ೨೦೦೯)

ಅಜ್ಜಿಯ ನೆನಪುಅಜ್ಜಿಗೆ ಅವಳದ್ದೇ ಆದ ಕಾಯ್ದೆ-ಕಾನೂನು. ಯಾವತ್ತೂ ಅವಳು ಬೇರೆಯವರ ಬಿಡಿ... ಸ್ವ೦ತ ಗಂಡ ಕಾಯ್ದೆ ಮಾಡುವ ಹಾಗೂ ಇಲ್ಲ ... ಮಾಡಿದರೂ ಅದನ್ನು  ಪಾಲಿಸಿದ್ದೂ ಇಲ್ಲ... ಕೇಳೀದ್ದೂ ಇಲ್ಲ. ಅವಳಿಗೆ ಅವಳದ್ದೇ ಆದ ಕಾಯ್ದೆ ಇದೆ. ಅವಳದ್ದೇ ಆದ ರೀತಿ ನೀತಿಗಳಿವೆ. ಅವಳದ್ದೇ ಆದ ಪ್ರತ್ಯೇಕತೆ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಅವಳಿಗೆ ಅವಳದ್ದೇ ಆದ ಒಂದು ಭಾಷೆ... ಅವಳದ್ದೇ ಬೇರೆ ಅರ್ಥಕೋಶ.... ಅದೊಂದು ಶೈಲಿ ಮೊದಲಿನಿಂದಲೂ ಅವಳಿಗೆ ರಕ್ತಗತವಾಗಿ ಬಂದಿತ್ತೇನೋ.

ಆದರೆ ಸಾಮಾನ್ಯರಾದ ನಮಗೆಲ್ಲ ಅದೊಂದು ವಿಚಿತ್ರ ಶೈಲಿ ಎನ್ನಿಸದೇ ಇರದು. ಈ ಮೊದಲೇ ಹೇಳಿದಂತೇ .. ಅಜ್ಜನಿಗೆ ಅವಳು ಯಾವತ್ತೂ ಕೈ ಮುಗಿದಿದ್ದಿಲ್ಲ. 
"ನಿಂಗಳ ದೇವ್ರಿಗೆ ಕೈ ಮುಕ್ಕೊಡ್ತೆ... ಅಂಗಡಿಗೆ ಹೊಗ್ ಬಂದ್ ಕೊಡ್ರೋ ಬಗೆಲಿ"

ಒಂದು ವೇಳೆ ಅಜ್ಜ ಹೋಗಿ ಅಂಗಡಿಯಿ೦ದ ಸಾಮಾನು ತಂದ್ರೆ ಸರಿ. ಇಲ್ಲದಿದ್ರೆ... ಅಜ್ಜಿಯ ವರಾತ ಶುರು. ಅಜ್ಜ ಹೇಳಿದ ಮಾತು ಕೇಳುವುದಿಲ್ಲ ಎಂದು ತಿಳಿದೇ ಮೊಮ್ಮಕ್ಕಳ ಮೊರೆ ಹೋಗುವ ಪರಿ.... 
 "ತಮಾ, ಗುಬಾ.. ಬಗೇಲಿ ಅಂಗಡಿಗೆ ಹೊಗ್ ಬಂದ್ ಕೊಡು ನೀನಾರುವಾ.... ಈ ಅಜ್ಜಂದಿಕ್ಕಗೆ ಹೇಳ್ ಹೇಳ್ ಸಾಕಾತು" 
 ಎಂಬಾಗಿನ ಆ "ಅಜ್ಜಂದಿಕ್ಕ" ಎಂಬ ಶಬ್ದದ ಅರ್ಥ ಏನು?? ಇದ್ಯಾವ ಅರ್ಥಕೋಶದಲ್ಲಿರಬಹುದೆಂದು ನಾನು ಬಹಳ ಸಲ ಯೋಚಿಸಿದ್ದಿದೆ. ಒಂದು ಅಜ್ಜಿಗೆ ಎಷ್ಟು ಗಂಡಂದಿರಿರಬಹುದು? ಕೊನೆಗೂ ಉತ್ತರ ಹುಡುಕಲಾರದೇ ಅಜ್ಜಿಗೇ ಅವಳದೇ ಧಾಟಿಯಲ್ಲಿ ಮರು ಪ್ರಶ್ನೆ ಹಾಕಿದ್ದೆ ... 
" ಅಜ್ಜೀ, ಅಜ್ಜಂದಿಕ್ಕ ಅಂದ್ರೆ ಎಂತಾ ಅರ್ಥವೇ? ನಿಂಗೆಷ್ಟು ಜನ ಗಂಡದ್ದಿಕ್ಕೊ ಇದ್ವೇ?" ಹಾಗೆಯೇ ಅಜ್ಜಿಯ ಮುನಿಸಿಗೂ ಕಾರಣವಾಗಿದ್ದೆ.

ಹಾಗೆಯೇ ಕೆಲಸಗಾರರು ಬರದೇ ಇರುವಾಗ ಅಜ್ಜಿಯ ವರಾತ...
 "ಮಾಣಿ, ಆ ತಿಪ್ಪಯ್ಯನ ಬಗೆಲಿ ಕರ್ಕಬಂದ್ ಕೊಡು ನಂಗೆ" ಎಂಬ ಮಾತು ಕೇಳಿ ನಾನು ಕೇಳಿದ್ದೆ...
 " ಅಜ್ಜೀ ನಿಂಗೆ ತಿಪ್ಪಯ್ಯ ಎಂತಕ್ಕೆ? ಅವನ್ನ ತಗಂಬಂದು ಕೊಟ್ರೆ ಎಂತಾ ಮಾಡಂವಿದ್ದೆ ಅವನ ಸಂತಿಗೆ?" !!

ಇಂತಹ ಮಾತುಗಳಿಂದಲೇ ಅಜ್ಜಿ ಸಿಟ್ಟಾಗುತ್ತಿದ್ದಳು.
"ಇಂವಾ ದರಿದ್ರ ಮಾಣಿ, ನನ್ ಜೀಂವ ತೆಗೂಲೇ ಹುಟ್ಟಿದ್ದ, ತಮಾ ಹಿಡ್ಕಳ ಅವನ್ನಾ" 
ಎನ್ನುತ್ತ... ಆ ಮಣಭಾರದ ದೇಹ ಹೊತ್ತುಕೊಂಡು ಓಡಿ ಅಟ್ಟಿಸಿಕೊಂಡು ಬರುವ ಪ್ರಯತ್ನವನ್ನಂತೂ ಮಾಡುತ್ತಿದ್ದಳು. ನಾ ಓಡುತ್ತಲಿದ್ದೆ. 
(ಹಿಂದೊಮ್ಮೆ ಗೀಚಿದ್ದು) 
(ಗೀಚಿದ ದಿನಾಂಕ - ಜುಲೈ ೩೦, ೨೦೦೯)

ತುಪ್ಪ - ಬೆಲ್ಲ


ತುಪ್ಪ ಬೆಲ್ಲದ ನಂಟು ಹಾಗೂ ರುಚಿ ಗೊತ್ತಿಲ್ಲದ ಹೈಕಳಿಲ್ಲ. ದಿನ ಬೆಳಗಾದರೆ ದೋಸೆ ಜೊತೆಗೆ ತುಪ್ಪ ಬೆಲ್ಲ ಹವ್ಯಕರ ಸಾಮಾನ್ಯ ಆಸರಿ. ಬೆಳಗ್ಗಿನ ತಿಂಡಿಗೆ 'ಆಸರಿ' ಎನ್ನುವುದೇ ಸರಿಯಾದ ಹವ್ಯಕ ಶಬ್ದ. ಆ ನಂತರ ಮಾಡುವ ಉಪಾಹಾರಗಳು ಆಯಾ ಸಮಯವನ್ನು ಸೇರಿಸಿಕೊಂಡ ಆಸರಿಗಳಾಗುತ್ತವೆ. ಉದಾ - ೧೦ ಗಂಟೆಯ ಆಸರಿ, ಸಂಜೆಯ ಆಸರಿ ಮುಂ..

ಚಿಕ್ಕ ಮಕ್ಕಳಿಗೆ ಸಾಮಾನ್ಯವಾಗಿ ಊಟ ಅಂದರೆ ಅಲರ್ಜಿ.. ಆಸರಿಯೇ ಇಷ್ಟ.. ನಮಗೂ ಹಾಗೇನೇ ...ಬೆಳಿಗ್ಗೆ - ಮಧ್ಯಾಹ್ನ- ಸಂಜೆಗಳೆಂಬ ಬೇಧವಿರಲಿಲ್ಲ ಈ ಆಸರಿಗೆ. ಶಾಲೆಗೆ ಹೋಗುವ ಮಕ್ಕಳು ನಾವಾಗ.
ನನಗಿಂತ 5 ವರ್ಷ ದೊಡ್ಡವ ನನ್ನಣ್ಣ. ಸಂಜೆ ಸರಿ ಸುಮಾರು 5 ಗಂಟೆಗೆ ಮನೆ ಸೇರುತ್ತಿದ್ದೆವು.  ಶಾಲೆಯಿಂದ ಬಂದ ತಕ್ಷಣ ಆಸರಿ - ಬೆಳಿಗ್ಗೆ ಎರೆದಿಟ್ಟು ... ಉಳಿದ ಗಟ್ಟಿಯಾದ ವಣಾ ದೋಸೆ ಅಥವಾ ವಣಾ ತೆಳ್ಳೇವು ಜೊತೆಗೆ ತುಪ್ಪ-ಬೆಲ್ಲ... ಕೊಡುವವಳು - ಅಜ್ಜಿ ! ಅದೇ ಕಾರಣಕ್ಕೆ ಈ ಅಜ್ಜಿಯೆಂದರೆ ನನಗೆ ತುಂಬ ಇಷ್ಟ ಮತ್ತು ಕಷ್ಟವೂ ಕೂಡ.

ಅಜ್ಜಿ ತುಪ್ಪ ಇಡುವ ಜಾಗ ಮಾತ್ರ ಮನೆಯ ಅತೀ ರಹಸ್ಯದ ಕೋಣೆಯಾದ ದೊಡ್ಡವಳಗೆ ಕೂಜಳ್ಳಿ ಮಾಣಿ ಪೆಟ್ಟಿಗೆಯಲ್ಲಿ ಎಂಬುದಷ್ಟೇ ಗೊತ್ತಿತ್ತು!! ಇತ್ತೀಚೆಗಷ್ಟೇ ಗೊತ್ತಾಗಿತ್ತು. ಆದರೂ ಆ ಪೆಟ್ಟಿಗೆಯ ಚಾವಿ ಅಜ್ಜಿಯ ಹತ್ತಿರ ಇರುವ ಕಾರಣ ಅದರಲ್ಲಿರುವ ತುಪ್ಪ ನಮ್ಮ ಕೈ-ಬಾಯಿಗೆ ಎಟುಕದಂತಿತ್ತು.

ಅದು ಬೇಸಿಗೆಯ ಕಾಲ. ರಜಾ ದಿನಗಳು. ಸ೦ಜೆ 4 ಘಂಟೆಗೆ ಮೊದಲೇ ನಮಗೆಲ್ಲ ಅರಕಲು ಗದ್ದೆ ಬೈಲಲ್ಲಿ ಆಟ ಆಡಲು ಹೋಗುವ ಕಾತುರ. ಆದರೆ ಶಾಲೆಯ ಸಮಯದ ಪ್ರಕಾರ ಹಾಗೂ ಅಜ್ಜಿಯ ಶಿಸ್ತಿನ ಪ್ರಕಾರ 5 ಹೊಡೆಯುವ ಮುನ್ನ ನಮಗೆ ಆಸರಿ ಸಿಗುವುದು ಅಸಾಧ್ಯ. ಮೊದಲೇ ಕೇಳಿದ್ರೆ... "ತಮಾ 5 ಘಂಟೆಯಾದ್ರೂ ಆಗ್ಲಿ, ಕಡೆಗೆ ಹಸಿವಾಗೊಗ್ತು" ಎನ್ನುತ್ತಿದ್ದಳು. ಒಂದು ವೇಳೆ ಆಸರಿ ಕುಡಿಯದೇ ಆಟ ಆಡಲು ಹೋದರೆ ಇದೇ ಅಜ್ಜಿ "ವಂದ್ ಹನೀ ಆಸರಿನೂ ಕುಡಿದೇ ಹೋಜ ಸುಟ್ ಪೋರಗ.." ಎಂದು ಬಯ್ಯುತ್ತಿದ್ದಳು. ಈ ಅಜ್ಜಿ.. ಹಾಗೂ ಅವಳ ಆ 'ಘಂಟೆ'ಯ ಪರಿಧಿ-ಪರಿಮಿತಿ ಮುಖ್ಯವಾಗಿ ನನ್ನ ಆಟಕ್ಕೆ ಅಡ್ಡಿಯಾಗಿದ್ದವು.

ವಂದಿನ ಇವೆಲ್ಲ ಕಷ್ಟಗಳಿಗೆ ನಾನೊಂದು ಉಪಾಯ ಕಂಡುಕೊಂಡೆ. ಸುಮಾರು 4 ಘಂಟೆಯಾಗುವ ಹೊತ್ತಿಗೇ ಗಡಿಯಾರದ ಮುಳ್ಳನ್ನು 5 ಘಂಟೆಯಾಗುವ ಹಾಗೆ ತಿರುಗಿಸುವುದು. ಆಗ ಅಜ್ಜಿ ಆಸರಿಗೆ ಕೊಡುವಳಲ್ಲ!  ಹಾಗೆ ಗಡಿಯಾರದ ಮುಳ್ಳನ್ನು ತಿರುಗಿಸಲು ಗೋಡೆಗೆ ಎತ್ತರದಲ್ಲಿ ತೂಗುಹಾಕಿದ್ದ ಗೋಡೆ ಗಡಿಯಾರ ಸುಲಭದಲ್ಲಿ ಎಟಕುತ್ತಿರಲಿಲ್ಲ. ಅದಕ್ಕೋಸ್ಕರ ಸರ್ಕಸ್ ಮಾಡಬೇಕಿತ್ತು ನನಗೆ. ಮನೆಯಲ್ಲಿದ್ದ ಒಂದೇ ಒಂದು ಎತ್ತರದ ಮರದ ಸ್ಟೂಲ್  - ಅತೀ ಭಾರವಾಗಿತ್ತು. ಅದನ್ನು ಹೇಗೆ ಎಳೆದು ತಂದೆನೋ ಆ ಕಷ್ಟ ನನಗೇ ಗೊತ್ತು. ಹಸಿವು ಮನುಷ್ಯನಿಂದ ಏನೇನು ಮಾಡಿಸುತ್ತದೋ !

ಆ ದಿನ ಹೀಗೆ ಇಷ್ಟೆಲ್ಲ ಸರ್ಕಸ್ ಮಾಡಿ 4 ಘಂಟೆಗೇ "5 ಘಂಟೆಯಾತು ಅಜ್ಜೀ... ನೀ ಆಸರಿ ಕೊಡ್ತ್ಯ ಇಲ್ಲ ನಾ ಹಾಂಗೇ ಉಪಾಸ ಹೋಗಿ ಸಾಯವ?" ಎಂಬ ಭಾವನಾತ್ಮಕವಾಗಿ ಪ್ರಶ್ನೆ ಹಾಕಿ ತುಪ್ಪ-ಬೆಲ್ಲ ದೋಸೆ ಗಿಟ್ಟಿಸಿಕೊಂಡು ಆಟವಾಡಲು ಹಾರಿದೆ. 


 ಆಟ ಮುಗಿಸಿ ವಾಪಸ್ ಬರುವಾಗ ಮನೆಯ ಮೇಲಿನ ರಸ್ತೆಯ ಮೇಲೆ ಡಾಕ್ಟರ್ ಮಾವನ ಬೈಕ್ ನಿಂತಿತ್ತು. ಮನೆಗೆ ಹೋಗಿ ನೋಡಿದರೆ, ಅಜ್ಜಿ ಹಾಸಿಗೆಯಲ್ಲಿ ಮಲಗಿದ್ದಳು. ಅಮ್ಮನ ಕೇಳಿದೆ "ಅಜ್ಜಿಗೆ ಎಂತಾ ಆತೇ ಆಯಿ?"
ಆಯಿ ಹೇಳಿದ್ದು.... ನಾನು ಹೋದಮೇಲೆ ಅಜ್ಜಿ ಕೊಟ್ಟಿಗೆಗೆ ಹಾಲು ಕರೆಯಲು ಹೋಗಿದ್ದಾಳೆ, ಎಂದಿನಂತೇ (ಗಡಿಯಾರದ) 6 ಘಂಟೆಗೆ. !! ಆದರೆ ನನ್ನ ದೆಸೆಯಿಂದ ಗಡಿಯಾರ ಮುಂದಿದ್ದುದರಿಂದ.. ಸಮಯವಲ್ಲವಾದ್ದರಿಂದ ಎಮ್ಮೆ ಹಾಲು ಕೊಟ್ಟಿಲ್ಲ. ಆದರೂ ಅಜ್ಜಿ ಬಿಡದೇ ಒತ್ತಾಯಪೂರ್ವಕ ಹಾಲು ಕರೆಯಲು ಮುಂದಾದಾಗ ಎಮ್ಮೆ ಒದ್ದಿದೆ, ಅಜ್ಜಿ ಬಿದ್ದಿದ್ದಾಳೆ. ಇದು ಆಗಿದ್ದು.


ಅಂತೂ ಅಜ್ಜಿ ಒಂದು ವಾರ ಹಾಸಿಗೆ ಸೇರಿದಳು. ನನಗೋ ಖುಷಿಯೋ ಖುಷಿ. ಕನಿಷ್ಟ ಪಕ್ಷ ಆ ವಾರ ಗಡಿಯಾರ ಮುಂದಿಡುವ ಕಷ್ಟ ಇಲ್ಲವಲ್ಲ !! ಒಂದೇ ವಾರದಲ್ಲಿ ಅಜ್ಜಿ ಯಥಾಪ್ರಕಾರ ಸುಧಾರಿಸಿಕೊಂಡಳು. ಆದರೆ ಈ ಘಟನೆಯ ನಂತರ ಯಾಕೋ ಏನೋ.... ನನಗೆ ಗಡಿಯಾರ ಮುಂದಿಡುವ ಮನಸ್ಸಾಗಲಿಲ್ಲ. ಹಾಗೆಯೇ ಅಜ್ಜಿಯೂ ಮೊಮ್ಮಗನ ಘನಕಾರ್ಯ ಗೊತ್ತಾಗಿತ್ತೋ ಎಂಬಂತೇ... ನಾ ಕೇಳಿದಾಗಲೆಲ್ಲ ಆಸರಿ ಕೊಡತೊಡಗಿದ್ದಳು.   (ಹಿಂದೊಮ್ಮೆ ಗೀಚಿದ್ದು)
(ಗೀಚಿದ ದಿನಾಂಕ - ಜುಲೈ ೨೩, ೨೦೦೯)

ದೊಡ್ದ ವಳನೆಯಲ್ಲೊಂದು 'ದೊಡ್ದವಳ', ಇಡೀ ಮನೆಯಲ್ಲಿಯೇ ಅತೀ ಚಿಕ್ಕದಾದ ... ಯಾವ ರೀತಿಯಲ್ಲಿಯೂ ದೊಡ್ಡದಲ್ಲದ... ಯಾವುದೇ ಕೋನದಲ್ಲಿ ತರ್ಕಿಸಿದರೂ... ಊಹಿಸಿದರೂ... ತರ್ಕ-ಊಹೆ ಗಳಿಂದಲೂ ದೊಡ್ದತನ ಕಾಣದ ಆ ಕೋಣೆಗೆ "ದೊಡ್ಡ ಒಳ" ಎಂಬ ಹೆಸರು ಹೇಗೆ.. ಯಾಕೆ ಬಂತೋ ಎಂಬ ನಮ್ಮ ಮನದ ಶಂಕೆಗೆ ಇಡೀ ಮನೆಯ ಯಾವೊಬ್ಬ ಸದಸ್ಯನೂ ಇಲ್ಲಿಯವರೆಗೂ ನನಗೆ ಪರಿಹಾರ ಹೇಳಿದ್ದಿಲ್ಲ. ಬಹುಶಃ ಆ ಬಂಗಲೆಯಂಥಾ ಮನೆ ಕಟ್ಟಿಸಿದ ನನ್ನ ಅಜ್ಜನಿಗೂ ಗೊತ್ತಿತ್ತೋ ಇಲ್ಲವೋ ಶಂಕೆಯಿದೆ.

ಆ ದೊಡ್ದ ವಳದಲ್ಲಿ ಈಗಿನ ಗೋದ್ರೇಜ್ ಕಪಾಟುಗಳ ಹೋಲಿಕೆಯ ಒಂದು ಪುರಾತನ ಮರದ ಕಪಾಟು. ಆ ಕಪಾಟಿಗೆ ನನ್ನ ಅಜ್ಜ ಬಣ್ಣ ಬೇರೆ ಹೊಡೆಸಿದ್ದರು. ಆ ಸದ್ರಿ ಕಪಾಟಿನ ಮೇಲೊಂದು ಪೆಟ್ಟಿಗೆ. ಅದೇ ಕೂಜಳ್ಳಿ ಮಾಣಿ ಪೆಟ್ಟಿಗೆ*.  ಕಪಾಟು ಹಾಗೂ ಆ ಪೆಟ್ಟಿಗೆ ಎರಡಕ್ಕೂ ಸದಾ ಬೀಗ ಜಡಿದಿರುತ್ತಿತ್ತಾದ್ದರಿಂದಲೂ.... ಆ ಪೆಟ್ಟಿಗೆ ಕೈಗೆಟಕುವ ಎತ್ತರದಲ್ಲಿ ಇರದಿದ್ದುದರಿಂದಲೂ ...ಅದರೊಳಗೆ ಏನಿದೆಯೆಂಬುದು ಮಕ್ಕಳಾದ ನಮ್ಮ ಪಾಲಿಗೆ ವ೦ಥರಾ ಗುಟ್ಟೇ - ಕಗ್ಗಂಟೇ.


ಯಾವಾಗಲಾದರೂ ಆಳು-ಕಾಳುಗಳಿಗೆ ದುಡ್ಡು ಬೇಕಾದಾಗ ಅಜ್ಜ ಆ ಕೋಣೆ ಹೊಕ್ಕು ಹೊರಬರುವಾಗ ಕೈಯಲ್ಲಿ ದುಡ್ಡು ತರುವುದನ್ನು ನೋಡಿದ್ದೆ. ಬಹುಶಃ ಹಣ, ಅದೇ ಕಪಾಟು ಅಥವಾ ಪೆಟ್ಟಿಗೆಯಲ್ಲಿ ಇಡುತ್ತಿರಬೇಕು. ಜೊತೆಗೆ ಅಜ್ಜನ ರಾಜಕೀಯ ರಾಜಕೀಯೇತರ ಹಡಪಗಳು ಅದರಲ್ಲಿರಬಹುದು. ಮಕ್ಕಳು ಮುಟ್ಟಬಾರದೆಂಬ ಕಾರಣಕ್ಕೆ.. ಸುರಕ್ಷೆಯ ದೃಷ್ಟಿಯಿಂದ ಅವುಗಳಿಗೆ ಬೀಗ ಜಡಿದಿರಬಹುದು ಎಂಬ ಅಂದಾಜು ಅಷ್ಟೇ. ಇಷ್ಟೆಲ್ಲಾ ಅಮೂಲ್ಯವಾದ ವಸ್ತುಗಳು ಅಲ್ಲಿ ಇರುವುದರಿಂದಲೂ.... ಇಡೀ ಮನೆ ನಡೆಯಬೇಕಾದ ಹಣ ಹಾಗೂ ಕಾಗದ ಪತ್ರಗಳು ಅದೇ ಕೋಣೆಯಲ್ಲಿರುವುದರಿಂದಲೂ ಆ ಕೋಣೆ "ದೊಡ್ದ ಒಳ" ಎಂದು ಕರೆಸಿಕೊಂಡಿರಬಹುದೆಂಬುದು ನನ್ನ ಈಗಿನ ಊಹೆ. 

ಆದರೂ ಆ ದೊಡ್ದವಳದ ಆ ಕಪಾಟು ಹಾಗೂ ಆ ಪೆಟ್ಟಿಗೆಯಲ್ಲೇನಿದೆ ಎಂದು ಒಮ್ಮೆಯಾದರೂ ನೋಡಿಯೇಬಿಡಬೇಕೆಂಬಾಸೆ ಇನ್ನೂ ಪೂರೈಸಿರಲಿಲ್ಲ. ಆ ರಹಸ್ಯ ಬೇಧನ ಕಾರ್ಯಕ್ಕೆ ಒಂದು ದಿನ ಮುಹೂರ್ತವೂ ಬಂತಲ್ಲ.!!
ಯಾವಾಗಲೂ ಅಜ್ಜ ಒಳಹೋಗುವಾಗ ಜೊತೆಯಲ್ಲಿ ಮಕ್ಕಳು ಹೋಗುವ ಹಾಗಿರಲಿಲ್ಲ... ಗದರುತ್ತಿದ್ದ. ಆದ್ದರಿಂದಲೇ ಆ ದಿನ ಕೊನೆ ಗೌಡ ಕುಪ್ಪು ಮಾಸ್ತಿ ಸಂಬಳ ಕೇಳುವ ದಿನವೆಂದರಿತ ನಾನು ಮೊದಲೇ ದೊಡ್ದವಳಕ್ಕೆ ಹೋಗಿ ಪೆಟಾರಿಯ ಎಜ್ಜೆಯಲ್ಲಿ ಅವಿತಿದ್ದೆ .. ಅಜ್ಜ ಬರುವುದನ್ನೇ ಕಾಯುತ್ತ. ನನ್ನ ಊಹೆ ಸುಳ್ಳಾಗಲಿಲ್ಲ. 

ಅಜ್ಜ ಒಳಬಂದ.... ಸೊಂಟಕ್ಕೆ ಕೈ ಹಾಕಿ ಒಂದು ಬೀಗದ ಕೈ ತೆಗೆದ..... ಆ ಬೀಗದ ಕೈಯಿಂದ ಕೂಜಳ್ಳಿ ಮಾಣಿ ಪೆಟ್ಟಿಗೆಯ ಬೀಗ ತೆಗೆದು... ಪೆಟ್ಟಿಗೆಯ ಒಳಗೆ ಕೈ ತೂರಿಸಿ ಅಲ್ಲಿಂದ ಇನ್ನೊಂದು ಬೀಗದ ಕೈ ತೆಗೆದ. ಆ ಬೀಗದ ಕೈ ಕಪಾಟಿನ ಬೀಗಕ್ಕೆ ಕೈಯಾಗಿತ್ತು. !! ಅಬ್ಬಾ ಸುರಕ್ಷೆಯೇ !! ಹಾಗಾದರೆ ಇದರಲ್ಲೇನೋ ಅತ್ಯಮೂಲ್ಯವಾದ ವಿಶೇಷವಾದ ವಸ್ತುಗಳೇ ಇರಬಹುದೆಂದುಕೊಂಡೆ.
ನಿಜವಾಗಲೂ ಆ ಕಪಾಟಿನಲ್ಲಿಯೇ ದುಡ್ಡಿತ್ತು. ಅಜ್ಜ ದುಡ್ಡೆಣಿಸಿ ಮತ್ತೆ ಯಥಾಪ್ರಕಾರ ಬೀಗ ಜಡಿದು ತನ್ನ ಪಾಲಿಗೆ ತಾನು ಹೊರಟು ಹೋದ. ನನ್ನ ಎದೆ ಢವಗುಡುತ್ತಿತ್ತು. ಅಬ್ಬಾ ಪಾರಾದೆ. ಒ೦ದು ವೇಳೆ ಅಜ್ಜ ನೋಡಿದ್ದರೆ... ಎಂಬುದ ನೆನೆಸಿಕೊಂಡೇ ನಿಟ್ಟುಸಿರಿಟ್ಟೆ. 
 ಸರಿ ಇನ್ನು ಕೆಲಸವಾಯ್ತಲ್ಲ.. ಹೊರಬರುವ ಸನ್ನಾಹದಲ್ಲಿದ್ದೆ... ಅಷ್ಟರಲ್ಲಿ ಮತ್ತೆ ಯಾರೋ ಬರುವ ಸಪ್ಪಳವಾಯ್ತು. ಮುಂದಿಟ್ಟ ಹೆಜ್ಜೆ ಹಿಂಜರುಗಿತು. ಕುತೂಹಲ ಇಮ್ಮಡಿಯಾಯ್ತು. 

ಈ ಬಾರಿ ಅಜ್ಜಿ ಬರುತ್ತಿದ್ದಳು. ಅವಳೂ ಕೂಡ ಸೊಂಟಕ್ಕೆ ಕೈ ಹಾಕಿ ಬೀಗದ ಕೈ ತೆಗೆದಳು. 'ಅಬ್ಬಾ, ಏನಾಶ್ಚರ್ಯ !! ಒ೦ದೇ ಗಂಟಿಗೆ ಎರಡೆರಡು ಬೀಗದ ಕೈ !! ಕಪಾಟಿನಲ್ಲಿ ಬರೇ ದುಡ್ಡಿದೆ ಎಂದುಕೊಂಡಿದ್ದೆ, ಅಜ್ಜಿಗೆ ಬೇಕಾದ ಎನೋ ವಸ್ತು ಇರಬಹುದೆಂಬ ಕಲ್ಪನೆಯೇ ಇರಲಿಲ್ಲ. ಒಹ್ ಒಡವೆಗಳಿರಬೇಕು, ನೋಡೋಣ.. ಇರಲಿ ಒಂದೇ ಗುಂಡಿಗೆ ಎರಡು ಹಕ್ಕಿ' ಎಂಬಂತೇ ಮನದಲ್ಲೇ ಹಿಗ್ಗಿದೆ. ಕುತೂಹಲ ನೂರ್ಮಡಿಯಾಗಿತ್ತು. 

ಕೂಜಳ್ಳಿ ಮಾಣಿ ಪೆಟ್ಟಿಗೆಯೋಳಗೆ ಕೈ ಹಾಕಿದಳು ಅಜ್ಜಿ. ನನ್ನ ಕಣ್ಣು ಅವಳ ಕೈಯನ್ನೇ ಹಿಂಬಾಲಿಸುತ್ತಿತ್ತು. ಕೈ ಹೊರತೆಗೆವಾಗ ಕೈಯಲ್ಲಿ ಒಂದು ಬಾಟಲು... ಅರ್ರೆ .. ಏನಾಶ್ಚರ್ಯ... ಇಷ್ಟು ದಿನವಾದರೂ ಅಜ್ಜಿ ತುಪ್ಪ ಎಲ್ಲಿಡುತ್ತಾಳೆಂಬುದು ಗುಟ್ಟಾಗಿಯೇ ಇತ್ತು... ರಹಸ್ಯ ಬಯಲಾಗಿತ್ತು. ಅದು ತುಪ್ಪದ ಬಾಟಲಿ !! 'ಅಬ್ಬಾ ಅಜ್ಜಿಯೇ, ನಿನ್ನೆ ಅಷ್ಟೇ "ತುಪ್ಪ ಖಾಲಿ ಮಗ" ಎ೦ದು ಸುಳ್ಳು ಹೇಳಿದ್ದಳಲ್ಲ !! ಇನ್ನೂ ಇಲ್ಲಿ ಬಚ್ಚಿಟ್ಟಿದ್ದಾಳೆ ಅಬ್ಬ ಅಜ್ಜಿ ಸಿಕ್ಕಿಬಿದ್ದಳು' ಎಂಬ ಖುಶಿಯಲ್ಲಿ... ಕಳ್ಳನನ್ನು ಹಿಡಿದ ಪೋಲೀಸ್ ನವನಂತೇ ಹಿಗ್ಗಿ ... ನಾನು ಬಚ್ಚಿಟ್ಟುಕೊಂಡಿದ್ದೆನೆಂಬುದನ್ನು ಮರೆತು.... ಅಜ್ಜಿಯ ಹತ್ತಿರ ಓಡಿ ಆ ತುಪ್ಪದ ಬಾಟಲನ್ನು ಕಸಿದುಕೊಂಡು "ಅಜ್ಜಿ... ಸಿಕ್ ಬಿತ್ತು... ಕಳ್ಳಜ್ಜಿ ಸಿಕ್ ಬಿತ್ತು... ಸುಳ್ಳಜ್ಜಿ ಸಿಕ್ ಬಿತ್ತು.... ಎನೇ ಕದ್ದು ಮುಚ್ಚಿ ತುಪ್ಪ ಇಟ್ಗಂಡು ಯಾರಿಗೆ ಕೊಡ್ತ್ಯೆ? ಕಳ್ಳಜ್ಜಿ ಸಿಕ್ ಬಿತ್ತು..... ಹಾ ಹಾಹಾ ... ಡಂಕಾ ನಕಾ.. ಡಂಕಾ ನಕಾ..." ಎಂದು ಕೈಯಲ್ಲಿ ತುಪ್ಪದ ಬಾಟಲು ಹಿಡಿದು ಸಿನೇಮಾದ ಹೀರೋನಂತೇ ಕುಣಿಯತೊಡಗಿದೆ ....ಕುಣಿಯುತ್ತ ಕೂಗುತ್ತಾ ಓಡತೊಡಗಿದ್ದೆ. 

"ಸುಟ್ ಮಾಣೀ... ಬಿದ್ ಹೋಕೋ.... ಕೊಡೋ ಇಲ್ಲಿ" ಎನ್ನುತ್ತ... ಎದುಸಿರು ಬಿಡುತ್ತ ನನ್ನನ್ನು ಹಿಡಿಯುವ ಪ್ರಯತ್ನದಲ್ಲಿ (ಅಸಲಿಗೆ ತುಪ್ಪದ ಬಾಟಲು ಹಿಡಿಯುವ ಹುನ್ನಾರದಲ್ಲಿ!?) ಅಜ್ಜಿ ನನ್ನ ಅಟ್ಟಿಸಿಕೊಂಡು ಬರುತ್ತಿದ್ದಳು ! 

ನಾ ಓಡುತ್ತಲೇ ಇದ್ದೆ. 


* (ವಂದು ಕಾಲದಲ್ಲಿ ಮನೆಯ ಮೊಮ್ಮಗನೊಬ್ಬ ಓದುತ್ತಿದ್ದ ಅಭ್ಯಾಸದ ಡೆಸ್ಕಿನ ತರಹದ ವಂದು ಪೆಟ್ಟಿಗೆಗೆ ಅಜ್ಜ ಇಟ್ಟ ಹೆಸರು ಕೂಜಳ್ಳಿಮಾಣಿಯ ಪೆಟ್ಟಿಗೆ. ಮಾಣಿ ಕೂಜಳ್ಳಿಯವನಾಗಿದ್ದ ಎಂಬುದು ಹೆಸರಿನಿಂದಲೇ ತಿಳಿಯಬಹುದು. 70 ರ ದಶಕದ ಸಿನೇಮಾಗಳಲ್ಲಿ ಲೇವಾದೇವಿ ನಡೆಸುವ ಸೇಟುಗಳು ಮುಂದಿಟ್ಟುಕೊಂಡು ಕೂಡ್ರುವ ಪೆಟ್ಟಿಗೆಯ ಹೋಲಿಕೆಯದ್ದು ಅಂದರೆ ಈ ಪೆಟ್ಟಿಗೆಯ ಚಿತ್ರಣ ಸರಿಯಾಗಿ ಬರಬಹುದು)


(ಹಿ೦ದೊಮ್ಮೆ ಗೀಚಿದ್ದು)
(ಗೀಚಿದ ದಿನಾ೦ಕ - ಜುಲೈ ೨೨, ೨೦೦೯)

ಅಜ್ಜಿ


ನಾನಾಗ ಚಿಕ್ಕವ. ಆ ಅಜ್ಜಿ ನನ್ನಪ್ಪನ ಅಮ್ಮ. ವಯಸ್ಸು 60 ಆಗಿತ್ತೇನೋ.. ಸಲ್ಪ ಧಡೂತಿ ದೇಹ. ಆಗ ನನಗೆ ಆ ದೇಹದ ಭಾರ ಲೆಕ್ಕ ಹಾಕುವಷ್ಟು ಪರಿಜ್ಞಾನ ಇರಲಿಲ್ಲ ... ಆಗಿನ ನೆನಪಿನೊ೦ದಿಗೆ ತಾಳೆ ಹಾಕಿ ಈಗ ಅಂದಾಜಿಸಬಲ್ಲೆ.... ಹತ್ತಿರ ಹತ್ತಿರ 100 ಕೆಜಿ. ಅಂದರೆ ಒಂದು ಕ್ವಿಂಟಾಲ್ !! ಅವಳೇನು ತಿನ್ನುತ್ತಿದ್ದಳೆಂಬುದು ಗೊತ್ತಿದ್ದರೂ ... ಅದು ಹೇಗೆ ದಪ್ಪವಾಗಿದ್ದಳೋ ಗೊತ್ತಿಲ್ಲ.

ಹಾಗೆಯೇ ಅವಳ ಗುಣಾವಗುಣಗಳನ್ನೆಲ್ಲ ಸರಿಯಾಗಿ ಹೇಳಬಲ್ಲೆ. ಮುದ್ದು ಮೊದ್ದಾಗಿದ್ದಳು ಅಜ್ಜಿ.... ಮನಸ್ಸು ಮುಗ್ಧವಾಗಿತ್ತಾದರೂ ಇಡೀ ಮನೆಗೆ ಯಜಮಾಂತಿಯಾಗಿ ತನ್ನ 18 ನೇ ವಯಸ್ಸಿನಿಂದ ಇಡೀ ಜೀವನ ಸಾಗಿಸಿದ್ದರಿಂದಲೋ... ಅಥವ ಯಜಮಾನ ಅಂದರೆ ಅಜ್ಜ ರಾಜಕಾರಣಿಯಾಗಿದ್ದ ಕಾರಣದಿಂದಲೂ ಇರಬಹುದೇನೋ, ವಂದು ತರಹದ ಗಾಂಭೀರ್ಯತೆ ಬಂದಿತ್ತೋ .. ಬರಿಸಿಕೊಂಡಿದ್ದಳೋ ಹೇಳಲಾರೆ. ಪೂರಾ 12 ಮಕ್ಕಳನ್ನು ಹೆತ್ತ ಆ ಅಜ್ಜಿಗೆ ಹಾಗೂ ರಾಜಕೀಯದ ಬಿಡುವಿನಲ್ಲೂ ಅಷ್ಟೊಂದು ಮಕ್ಕಳಿಗಾಗಿ ಸಮಯವನ್ನು ಮುಡಿಪಾಗಿಟ್ಟ ಆ ಅಜ್ಜನಿಗೂ ಒಂದೊಂದು ಬಿಸಿ ಬಿಸಿ ಸಲಾಮ್.

ಒಂದು ದಿನ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದೆ... ಮನೆಯ ಮೇಲಿನ ರಸ್ತೆಗೂ ಕೇಳುವಷ್ಟು ದೊಡ್ಡದಾಗಿ ಅಜ್ಜಿಯ ವದರಾಟ ಕೇಳುತ್ತಿತ್ತು. "ಮಾಣಿ ಇವ್ರತ್ರ ಗುಡ್ಡೆ ಹತ್ತುಲಾಗ್ತಿಲ್ಲೆ.. ಒ೦ದು ಪಾಯಖಾನೆ ಕಟ್ಟಿಸಿಕೊಡಿ ಅಂದ್ರೆ ಒಬ್ರೂ ಕೇಳ್ತ್ವಿಲ್ಲೆ... ನಿಂಗಳ ದೇವರಿಗೆ ಕೈ ಮುಕ್ಕೊಡ್ತೆ...". ಇಲ್ಲಿ 'ಮಾಣಿ' ಎಂಬ ಸಂಭೋದನೆ ಮನೆಯ ಹಿರಿಯ ಮಗನಾದ ನನ್ನಪ್ಪನಿಗೆ... 'ನಿಂಗಳ' ಎಂಬುದು ಗಂಡನಿಗೆ ಎಂದು ಬೇರೆ ಹೇಳಬೇಕಾಗಿಲ್ಲ. ನಾನು ನೋಡಿದಾಗಿನಿಂದ.. ನನ್ನ ಬುದ್ಧಿ ಬೆಳೆದಾಗಿಂದ ಅಜ್ಜಿ, ಅಜ್ಜನಿಗೆ ಯಾವತ್ತು ಕೈ ಮುಗಿದಿದ್ದನ್ನು ಕಂಡಿಲ್ಲ.. ಎಲ್ಲಾ ಕೈಮುಗಿತ ಅಜ್ಜನ ದೇವರಿಗೇ... ಆ ಅಜ್ಜನ ದೇವರು ಯಾವುದೋ ನನಗ್ಗೊತ್ತಿಲ್ಲ. ಇವತ್ತಿಗೂ ಅದೊಂದು ಒಗಟೇ.!!

ಸರಿ ನನ್ನಜ್ಜ ಮನೆಗೆ ಮಾರಿ, ಊರಿಗೆ ಉಪಕಾರಿ. 9 ಮೊಳದ ಪಂಜಿ ಉಟ್ಟು ಜುಬ್ಬಾ ಹಾಕಿ 3 ಮೊಳದ ಕಾಲಲ್ಲಿ 6 ಮೊಳದ ಹೆಜ್ಜೆ ಹಾಕಿ ಎಲ್ಲೋ ಸಮಾಜೋಪಕಾರಕ್ಕೆ ಪರಾರಿ. ಪಾಪ ಅಪ್ಪ ಕೂಡಲೇ ಗ್ವಾಕರ್ಣ ಮಜ್ಜಿಗೆ* ಕುಡಿದು (ನೀರಿಗೆ ಮಜ್ಜಿಗೆ ಸೇರಿಸುವುದನ್ನು ನಮ್ಮಲ್ಲಿ ಆ ಹೆಸರಿನಿಂದ ಕರೆಯುವುದು ವಾಡಿಕೆ) ಸೈಕಲ್ ಹತ್ತಿ ಎಲ್ಲಿಗೋ ಹೋದವರು ಬರುವಾಗ ಸಾವೇರನನ್ನೇ ಕರೆತಂದಿದ್ದರು. ಸಾವೇರ ನಮ್ಮನೆಯ ಖಾಯಂ ಗಾರೆ ಗಿಲಾಯದವ.

ಮರುದಿನವೇ ನಮ್ಮನೆಯ ಹತ್ತಿರ 2 ಲೋಡ್ ಕಡಿಗಲ್ಲು... 1 ಲಾರಿ ಮರ‍ಳು... 10 ಮೂಟೆ ಸಿಮೆಂಟ್ ಬಂದು ಬಿದ್ದಿತ್ತು. ಅದಕ್ಕೂ ಮಾರನೆಯ ದಿನ ಅದ್ಯಾರೋ ೪-೫ ಜನ ಆಳುಗಳು ಬಾವಿ ತೆಗೆಯಲು ಬಂದರು. ಸರಿ ವಾರವೊಂದರಲ್ಲೇ ಪಾಯಖಾನೆಯ ಹೊಂಡ ತಯಾರು. ಮರುದಿನ ಸಾವೇರ ಬಂದ.. ಹೊಂಡ ಪರಿಕಿಸಿದ. "ವಡ್ಯಾ, ಈ ಅಮಟೆ ಗಿಡ ಮತ್ತೆ ಹಲಸಿನ ಮರ ಕಡಿಸುದೇಯಾ ಇಲ್ದಿದ್ರೆ ಪಾಯಖಾನೆ ಹೊಂಡದ ಕಾಂಕ್ರೀಟ್ ಕಿತ್ಗ ಬತ್ತದೆ"....

ಆ ಮಾತು ಅಜ್ಜಿಗೆ ಅದು ಹೆಂಗೆ ಕೇಳೀಸ್ತೋ... ಅಶರೀರ ವಾಣಿ ಬಂತು ಅವತಾರವಾಗುತ್ತ. "ಮಾಣಿ, ಅದು ಗನಾ ಹಲ್ಸಿನ ಮರ.. ಚೆಕ್ಕೆ ಹಣ್ಣು... ಮೇಲಿಂದ ಕರುಲೆ ಚೋಲೋ ಬತ್ತು.... ಅಮಟೆ ಗಿಡ ಈಗ್ ಮಾತ್ರ ಕಾಯ್ ಬಿಡುಲೆ ಹಣಕಿದ್ದು... ಅದೆಲ್ಲ ಎಂತಕೆ ತೆಗೀಬೇಕ ಸಾವೇರ?ನಿಂಗೆ ತಲೆ ಸಮಾ ಅದ್ಯಾ?"

"ಹಾಂಗಲ್ರಾ ದೊಡ್ ವಡ್ತಿ, ಆ ಮರ ಕಡಿಗೆ ಟ್ಯಾಂಕ್ ಒಳ್ಗೇ ಬೇರು ಬಿಡ್ತದೆ, ಕಡಿಗೆ ಇಡೀ ಊರ್ ತುಂಬಾ ವಾಸ್ನೆ ಆಗ್ತದೆ.. ಅಡ್ಡಿಲ್ರಾ? ಅಷ್ಟಕ್ಕೂ ನಿಮ್ಮನೇಲಿ ಬರೀ ಇದೊಂದೇ ಹಲ್ಸಿನ ಮರನೇನ್ರಾ? ಆ ಅಮಟೆ ಗಿಡ ಬೇಕಾರೆ ಕಿತ್ತಿ ಬೇರೆ ಬದಿಗೆ ನೆಡ್ವಾ.. ಒಂದ್ ನಾಲ್ಕ್ ಜನ ಕೈ ಹಾಕಿರೆ ಹೊತ್ಗಂಡು ಹೋಗಿ ಆ ಗೊಬ್ಬರಗುಂಡಿ ಕೆಳಗೆ ನೆಡ್ಲಕ್ಕು ಅದನ್ನಾ" ಎಂದ ಸಾವೇರ.

"ಏನೂ ಬೇಡ, ಅಲ್ಲಿ ಬೇಡ ಬೇರೆ ಬದಿಗೆ ಪಾಯಖಾನೆ ಮಾಡ್ಸ ಮಾಣಿ" ಅಜ್ಜಿಯ ತಾಕೀತು.

"ಅಲ್ದೇ ಆಯಿ, ಅಲ್ಲಲ್ಲದೇ ಇನ್ನೆಲ್ಲಿ ಮಾಡುಲೇ ಜಾಗ ಇದ್ದು? ಗುಡ್ಡೆ ಮೇಲೆ ಪಾಯಖಾನೆ ಕಟ್ಟಿಸ್ಲನೇ? ಅಷ್ಟಕ್ಕೂ ಆ ಹಲಸಿನ ಮರ ಹೋಗ್ತು ಹೇಳೀ ನಿನ್ನ ಬೇಜಾರು ಅಲ್ದಾ? ಮತ್ತೆ ಒಂದಲ್ಲ ಎರಡು ಹಲಸಿನ ಗಿಡ ತಯಾರು ಮಾಡ್ವ ಬಿಡು" ನನ್ನಪ್ಪನ ಮಾರುತ್ತರ.

"ಬೇಕಾಯ್ದಿಲ್ಯೋ.... ಆ ನಿನ್ನ ಪಾಯಖಾನೆ ಬೇಡಾ ಯಂಗೆ.... ಸಾವೇರ ನೀ  ನಡೆ
ಮನೆಗೆ" ಅಜ್ಜಿಯ ಮಾತೆಂದರೆ ಕಪ್ಪೊಂದು ತುಂಡೆರಡು.

"ಥೋ ವಡ್ತಿ ಹೀಂಗಂದ್ರೆ ಹೇಂಗ್ರಾ? ಈಗ ಆ ತೋಡಿದ ಹೊಂಡದಲ್ಲಿ ಯಾರ್ನ ಹುಗೂದು ಹಾಂಗರೆ? ಅದನ್ನಾರೂ ಹೇಳೀ" ಸಾವೇರನ ಕುಹಕ.

"ನಾ ಮೊದ್ಲೇ ಬಡ್ಕಂಡೆ, ಆ ಸುಟ್ ಪಾಯಖಾನೆ ಎಲ್ಲಾ ಬೇಡಾ ಹೇಳೀ... ನನ್ ಮಾತು ಯಾರ್ ಕೇಳ್ತೋ ಇಲ್ಲಿ" !!!!

"ಅಜ್ಜೀ, ಇವತ್ತು ಗುಳಿಗೆ ತಗಂಜ್ಯನೇ ಬೆಳಿಗ್ಗೆಯಾ?!!" ಎಂದೆ ಇಷ್ಟೊತ್ತೂ ಮೂಕ ಪ್ರೇಕ್ಷಕನಾಗಿದ್ದ ನಾನು. ಗೊಳ್ಳೆಂದರು ಅಪ್ಪ ಮತ್ತು ಸಾವೇರ. ಒಳಗಿದ್ದ ಅಮ್ಮ ನಗು ತಡೆಯಲಾರದೇ ಕಿಸ್ಸೆಂದಿದ್ದು ಜಗಲಿಯವರೆಗೂ ಕೇಳಿತ್ತು.

ಬಯ್ಗುಳದೊಂದಿಗೆ ಅಜ್ಜಿಯ ದೈತ್ಯ ದೇಹ ನನ್ನನ್ನು ಅಟ್ಟಿಸಿಕೊಂಡು ಬರುತ್ತಿತ್ತು.. ನಾ ಪಾಯಖಾನೆಯ ಹೊಂಡದ ಕಡೆಗೆ ಓಡುತ್ತಲಿದ್ದೆ....


ಅಜ್ಜಿ ಹೊಂಡದ ವರೆಗೂ ಬಂದವಳು ಏನನ್ನಿಸಿತೋ.. ಸುಸ್ತಾಯಿತೋ... ಗೊತ್ತಿಲ್ಲ ವಾಪಸ್ಸು ಹೋದಳು. ಒಂದು ವೇಳೆ ಬಿದ್ದಿದ್ದರೆ ಸಾವೇರ ಮಣ್ಣು ಮುಚ್ಚುತ್ತಿದ್ದ... !!??

(ಈ ಗ್ವಾಕರ್ಣ ಮಜ್ಜಿಗೆಯ ಬಗ್ಗೆ ಇನ್ನೊಮ್ಮೆ ಹೇಳುವೆ. ಶ್ರೀ ಕ್ಷೇತ್ರ ಗೋಕರ್ಣಕ್ಕೂ ಈ ಮಜ್ಜಿಗೆಗೂ ಸಂಬಂಧ ಅಸ್ಪಷ್ಟ.)
(ಹಿಂದೊಮ್ಮೆ ಗೀಚಿದ್ದು)
(ಗೀಚಿದ ದಿನಾಂಕ - ಜುಲೈ ೨೧, ೨೦೦೯)

ಅನುಭವ"
ಮಾ ಚೌಡಿ ಪೂಜೆ ಮಾಡ್ಕ ಬಾ" ನನ್ನ ದೇವರ ಪೂಜೆಯ ಮಧ್ಯೆ ಆಯಿಯ ಅಶರೀರ ವಾಣಿ ಕೇಳಿಸಿತ್ತು. ಆಯಿ ಎಲ್ಲೇ ಇದ್ದರೂ ಅಲ್ಲಿಂದಲೇ ಕೂಗುವುದು ರೂಢಿ. ಕೇವಲ ಶಬ್ದ ಕೇಳುತ್ತಿತ್ತೇ ಹೊರತೂ ಶರೀರ ಬರುತ್ತಿರಲಿಲ್ಲವಾದ್ದರಿಂದ ಕೂಗಿಗೆ ಅಶರೀರ ವಾಣಿ ಎಂಬುದೇ ಸೂಕ್ತ. ತೋಟದ ತುದಿಯಲ್ಲಿ ಒಂದು ಚಿಕ್ಕ ಚೌಡಿಯಗೂಡು ಅದಕ್ಕೆಮನೆಯೆಂಬ ಹೆಸರು. ಪ್ರತೀ ಮಂಗಳವಾರ ಹಾಗೂ ಶುಕ್ರವಾರ ಚೌಡಿಗೆ ಪೂಜಿಸಿ, ಒಂದು ತೆಂಗಿನಕಾಯಿ ಒಡೆಯುವುದು ಅನಾದಿಕಾಲದಿಂದಲೂ ಬಂದ ರೂಢಿ.

ನಾನು
ಚೌಡಿ ಮನೆಗೆ ಹೋದ ಸರಿಯಾದ ಸಮಯಕ್ಕೆ ತಿಮ್ಮಣ್ಣನೂ ಪೂಜೆಗೆ ಬಂದಿದ್ದ. ತಿಮ್ಮಣ್ಣ - ಸುಬ್ರಾಯ ಭಟ್ಟರ ಮನೆಯಲ್ಲಿ ಇದ್ದುಕೊಂಡು ಓದುತ್ತಿದ್ದ ಮಾಣಿ. ಇಡೀ ನಮ್ಮ ಹೈಕಳ ಕೇರಿಗೆ ಒಂದೇ ಚೌಡಿಯಾಗಿತ್ತಾದ್ದರಿಂದ ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ.. ಒಂದಲ್ಲ ಒಂದು ದಿನ ಚೌಡಿಗೆ ಪೂಜೆ ಸಲ್ಲಿಸುತ್ತಿದ್ದುದು ವಾಡಿಕೆ.

"
ತಿಮ್ಮಣ್ಣ, ಹಾಂಗೇ ನನ್ನ ಕಾಯೂ ವಡೆದು ಕೊಟ್ಬುಡೊ, ಪುರೋಹಿತ ನೀನು" ಎಂದೆ. ವಯಸ್ಸಲ್ಲಿ ಸಣ್ಣವನಾದ್ದರಿಂದ ಏಕವಚನ ಪ್ರಯೋಗ. ಸರಿ ಆತ ಪೂಜೆ ಮುಂದುವರಿಸುತ್ತಿದ್ದಂತೇ ಕೇಳಿದೆ.. "ಭಟ್ರು ಹೆಂಗಿದ್ರಡೋ?"

ಸುಬ್ರಾಯ
ಭಟ್ರು ಊರಿನ ಸುಮಾರು ೫೦ ಪ್ರತಿಶತ ಮನೆಗಳಿಗೆ ಪುರೋಹಿತರು. ಪುರೋಹಿತ್ಗೆ ಬಿಡುವ ಮನಸ್ಸಿಲ್ಲದ್ದಿದ್ದರೂ ಅನಾರೋಗ್ಯದ ಕಾರಣದಿಂದಲೂ.... ಇವರ ಅನಾರೋಗ್ಯವನ್ನರಿತು ಜನ ಕರೆಯುವುದ ಬಿಟ್ಟ ಕಾರಣದಿಂದಲೂ ಅನಿವಾರ್ಯವಾಗಿ ಪರಾನ್ನ ಬಿಟ್ಟು ಪರಾವಲಂಬಿಯಾಗಿದ್ರುಸದ್ಯ ಎರಡೇ ದಿನದ ಹಿಂದೆ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾದ್ದರಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆಂದು ಕೇಳಿದ್ದೆ. ಆದ್ದರಿಂದಲೇ ವಿಚಾರಿಸಿದೆ.

"ನಿನ್ನೆ
ಆಪರೇಷನ್ ಆತಡಾ, ಇನ್ನೊಂದು ವಾರ ಬಕ್ಕು" ಎಂದ.

ಹಾಗೇ
ಕಾಯಿ ಒಡೆಯಲು ಮುಂದಾದ. ಎಷ್ಟಂದ್ರೂ ಸಣ್ಣ ಮಾಣಿ... ಅವನ ತಪ್ಪಲ್ಲ.... ಒಂದು ಕಾಯಿಯ ಕಡಿ ಮಗುಚಿ ಬಿತ್ತು. ನನ್ನ ಬಾಯಿಯಿಂದ ಉದ್ಘಾರ ಹೊರಬಿತ್ತು "ಒಹ್.. ನಾ ಒಡೆಲನಾ?" ಇದು ಕಡಿ ಮಗುಚಿ ಬಿದ್ದ ಮೇಲೆ ಕೇಳುವ ಪ್ರಶ್ನೆಯೇ ಅಲ್ಲವಾದರೂ ಪರಾವರ್ತಿತ ಪ್ರತಿಕ್ರಿಯೆಯಾಗಿ ಬಾಯಿಂದ ಹೊರಬಿದ್ದಿತ್ತು.

ಮನೆಗೆ
ಬಂದು ಊಟ ಮಾಡಿ ವಾಡಿಕೆಯಂತೇ ಚಾ ಕುಡಿಯುತ್ತಿದ್ದೆವು. ಶವವಾಹನದ ಸದ್ದು ಕಿವಿಗೆ ಹೊಕ್ಕಾಗ ..ಸೀದಾ ಮನಸ್ಸು ಎಣಿಸಿದ್ದು "ಸುಬ್ರಾಯ ಭಟ್ರು?!"

ಅಪ್ಪಯ್ಯ
"ಅಬಾ ಯಾರಪಾ ಇದು! " ಎಂದು ಉದ್ಘರಿಸಿ ಅಂಗಿ ತೊಟ್ಟು ರಸ್ತೆಗೆ ಹೋಗಿ ಐದೇ ನಿಮಿಷಕ್ಕೆ "ಸುಬ್ರಾಯ ಭಟ್ರು ಹೋಗೋದ್ರು" ಎನ್ನುತ್ತ ವಾಪಸ್ಸು ಬಂದಾಗ ನಾನು ತಳಮಳವೋ ... ಅಶ್ಚರ್ಯವೋ .... ಗಾಬರಿಯೋ... ತಿಳಿಯದ ಸ್ಥಿತಿಗೆ ತಲುಪಿದ್ದೆ.

ಅಜ್ಜಿಯ... ಆಯಿಯ ನಂಬಿಕೆಗಳನ್ನು ಮೂಢನಂಬಿಕೆಗಳೆಂದುಕೊಂಡಿದ್ದೆ.  ನಂಬಿಕೆಗಳು ಕೇವಲ ಮೂಢನಂಬಿಕೆಗಳಲ್ಲವಾ? ನಿಜಕ್ಕೂ ಇವೆಲ್ಲವನ್ನು ನಮ್ಮ ಹಿರಿಯರು ತಮ್ಮ ಅನುಭವಗಳಿಂದ ಕಲಿತಿದ್ದರಾ? ಒಂದೂ ಅರ್ಥವಾಗದ - ಉತ್ತರವಿಲ್ಲದ ಪ್ರಶ್ನೆಗಳು !!
(ಹಿಂದೊಮ್ಮೆ ಗೀಚಿದ್ದು)
(ಗೀಚಿದ ದಿನಾಂಕ - ಜುಲೈ ೧೯, ೨೦೦೯.)