ಶೃದ್ಧಾಂಜಲಿ

ದಿನ ಯಾರೋ ಒಬ್ಬರ ಟೇಪ್ ರೆಕಾರ್ಡರ್ ಒಂದನ್ನು ರಿಪೇರಿಗೆ ಅಂತ ತಂದಿದ್ದೆ ...
ನಾನೇನೂ ಪಕ್ಕಾ ನುರಿತ ರಿಪೇರಿಯವನಾಗಿರಲಿಲ್ಲ... ಸಣ್ಣ ಪುಟ್ಟ ರಿಪೇರಿಯ ಹುಚ್ಚು ನನ್ನಲ್ಲಿತ್ತು .... ಅದನ್ನು ಸರಿ ಮಾಡುವೆನೆಂಬ
ವಿಶ್ವಾಸವಿಲ್ಲದಿದ್ದರೂ ಮತ್ತೆ ಜಾಸ್ತಿ ಕೆಡಿಸುವುದಿಲ್ಲವೆಂಬ ಆತ್ಮವಿಶ್ವಾಸ ನನ್ನಲ್ಲಿರುತ್ತಿತ್ತು. ಅದನ್ನು ಕೊಡುವ ಗ್ರಾಹಕನಿಗೆ, 'ಇವ ರಿಪೇರಿಮಾಡುವ'ನೆಂಬ ವಿಶ್ವಾಸ ವಿಲ್ಲದಿದ್ದರೂ "ಒಂದು ವೇಳೆ ಸರಿ ಹೋದರೆ ಪುಕ್ಕಟೆಯಲ್ಲಿ ಆಯ್ತಲ್ಲ" ಎಂಬ ಭಾವವಿರುತ್ತಿತ್ತು. ಅಂದರೆ ಒಂದು ಲೆಕ್ಕದಲ್ಲಿ ಇಬ್ಬರೂ ತಮ್ಮ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದೆವು ಎನ್ನಬಹುದು !!


ರವಿವಾರವಿರಬೇಕು, ಹಾಗೆ ಮಧ್ಯಾಹ್ನ ಊಟ ಮಾಡಿ ಅದನ್ನು
ಬಿಚ್ಚಿ 'ನಾ-ದುರಸ್ತಿಯ' ಕಾಯಕದಲ್ಲಿ ತೊಡಗಿ ಚಂಚಲವಾದ ಮನಸ್ಸನ್ನು ಹತ್ತಿಕ್ಕಲಾಗದೆ ಬಿಚ್ಚಿದ್ದ ವಸ್ತುಗಳನ್ನು ಹಾಗೆ ಬಿಟ್ಟು ಎಲ್ಲೋ ಹೊರಟು ಹೋದೆ
 
ಸಂಜೆ ವಾಪಸ್ಸು ಬಂದು ನೋಡುವಾಗ ಬಿಚ್ಚಿಟ್ಟಿದ್ದ ಟೇಪ್ ರೆಕಾರ್ಡರ್ ಜಾಗದಲ್ಲಿ ಇರಲಿಲ್ಲ. ಸೀದಾ ಆಯಿಯಲ್ಲಿ ಕೇಳಿದೆ. "ಅವ್ರುಏನೋ ಚೊಕ್ಕ ಮಾಡ್ತಾ ಇದ್ದಿದ್ರು ನೋಡು" ಎಂಬ ಉತ್ತರ ಬಂತು.


ಅಪ್ಪನಲ್ಲಿ ಕೇಳಿದೆ - "ಅಪ್ಪಯ್ಯ, ಇಲ್ಲಿ ಬಿಚ್ಚಿಟ್ಟಿದ್ದ ಟೇಪ್ ರೆಕಾರ್ಡರ್ ಎಲ್ಲೋತು?" "ಹರಡ್ಕ ಬಿದ್ದಿತ್ತು, ತೆಗದು ಚೀಲದಲ್ಲಿ ಹಾ
ಕಿಟ್ಟಿದ್ದೆ ನೋಡು ಗಿಳಿಗುಟ್ಟಕ್ಕೆ" ಅಪ್ಪಯ್ಯನ ಉತ್ತರ.
ಕಿರಾಣಿ ತರುವ ಆರಾಮ ಕುರ್ಚಿ ಅರಿವೆಯಿಂದ ಮಾಡಿದ್ದ ಚೀಲವದು. ಟಿಪಿಕಲ್ ಹವ್ಯಕರ ಮನೆಗಳ ಚೀಲ ... ಗಿಳಿಗುಟ್ಟಕ್ಕೆನೇತಾಡುತ್ತಿತ್ತು.


ಸಿಟ್ಟು ನೆತ್ತಿಗೇರಿತು. ನಮ್ಮದಲ್ಲದ ವಸ್ತು .. ಒಂದೋ ಎರಡೋ ಸ್ಕ್ರೂ ಕಳೆದರೂ ದಂಡ ತೆರುವ.. ಮರ್ಯಾದೆ ಪ್ರಶ್ನೆ.. !!
"ಥೋ... ಅಪ್ಪಯ್ಯ ಎಂತಕೆ ತೆಗದ್ಯ?" ಅಪ್ಪಯ್ಯನ ಮೇಲೆ ಹರಿ ಹಾಯ್ದೆ. "ಹರಡ್ಕ ಬಿದ್ದಿತ್ತಾ" ಅಪ್ಪಯ್ಯನ ಸಮಝಾಯಿಷಿ. "ಮಳ್ಳನಾ .. ಒಂದು ಸ್ಕ್ರೂ ಕಳೆದರೂ ಹೋತು.... ತಂದ್ ಕೊಡ್ತ್ಯಾ? ಮಳ್ಳಲಾ ಅಪ್ಪಯ್ಯ... ಬುದ್ದಿ ಇಲ್ಯನಾ.. ಹ್ಯಾಪನ ಹಾಂಗೆ ಆತಲ
... ಥೋ " ಸಿಟ್ಟು ವಿವೇಕ ಕೆಡಿಸಿತ್ತು.... ಅವಿವೇಕ ಅಪ್ಪನೆಂದೂ ನೋಡಲಿಲ್ಲ.. ಮೂರ್ಖನಾಗಿದ್ದೆ... 
 
ಅಷ್ಟರಲ್ಲೇ ಅಪ್ಪ ಚೀಲ ತೆಗೆದು ಸ್ಕ್ರೂ ಹುಡುಕಲು ಪ್ರಾರಂಭಿಸಿದ್ದರು ಪಾಪ. ಅದರಲ್ಲಿ ನಿಜವಾಗಲೂ ಒಂದು ಮುಖ್ಯವಾದ ಸ್ಕ್ರೂ ಸಿಗಲಿಲ್ಲ. ಮತ್ತೆ ವಟ ವಟ ಅಂತ ಅಪ್ಪನಿಗೆ ಬಯ್ಯುತ್ತಲೇ ಇದ್ದೆ. ಅಪ್ಪ ಇಡೀ ಜಗುಲಿಯಲ್ಲಿ ಪೊರಕೆ ಹಿಡಿದು ಗುಡಿಸಿ ಕಸಗಳ ನಡುವೆಯೂ ಹುಡುಕತೊಡಗಿದರು ಪಾಪ.
ತುಟಿ ಪಿಟಕ್ಕೆಂದು ಮಾತನಾಡದೆ - " ಅದೆಲ್ಲೋ ಇಲ್ಲೇ ಇರ್ತು, ನಂಗೆ ಗೊತ್ತಾಯ್ದಿಲ್ಲೆ " ಎಂದರು ಕ್ಷಮಾಪಣೆಯ ದನಿಯಲ್ಲಿ ಅಷ್ಟೇ.


ಎಷ್ಟೋ ನಿಮಿಷ ಹುಡುಕಾಟದ ನಂತರ ಮಹಾ ಸ್ಕ್ರೂ ಅಪ್ಪನಿಗೆ ಸಿಕ್ಕಿತು. ಅವರಿಗೆ ಇವನಿಂದ ಕಾಟ ತಪ್ಪಿತಲ್ಲ ಎಂದು ಖುಷಿಯಾಯ್ತೋ .. ಗೊತ್ತಿಲ್ಲ .. ನನಗೆ ಮಾತ್ರ ಆಗ ನನ್ನ ವಿವೇಕ ಹಿಂದಿರುಗತೊಡಗಿತ್ತು . ಆದರೆ ಕಾಲ ಮಿಂಚಿತ್ತು. ಮಾತು ಆಡಿದರೆಹೋಯಿತು .. ಮುತ್ತು ಒಡೆದರೆ ಹೋಯಿತು ಎಂಬ ಹಾಗೆ - ನಾನು ಏನೇನೋ ಬಯ್ದಿದ್ದೆ. ಮಗನ ಹುಚ್ಚಾಟ ವನ್ನು ನೋಡಿ - 'ತಾಕೊಟ್ಟ ಸಂಸ್ಕೃ
ತಿ' ಇದೆಯಾ ಎಂದು ಆಶ್ಚರ್ಯಪಟ್ಟಿರಬೇಕು ಅಪ್ಪ. . ನಾನು "ಸಾರೀ" ಎಂದೆನಾದರೂ ಹೆತ್ತ ತಂದೆಗೆ ಬಯ್ದಿದ್ದಕ್ಕೆ ಕ್ಷಮೆ ಇದೆಯಾ? ಸಮಾಧಾನವಂತೂ ಆಗಿಲ್ಲ ನನಗೆ.

ಇದಾದ ಕೆಲವೇ ದಿನಗಳಲ್ಲಿ ನಾ ಊರು ಬಿಟ್ಟಿದ್ದೂ - ಅಪ್ಪನ ಕಾಯಿಲೆ ವೃದ್ದಿಸಿದ್ದೂ - ಅವರು ನಮ್ಮನ್ನಗಲಿದ್ದೂ ಆಗಿ ಹೋಯಿತು. 


 ಒಂದೇ ಒಂದು ಸಲ ಅವರನ್ನಪ್ಪಿ "ಅಪ್ಪಯ್ಯ ತಪ್ಪಾತು... I'm sorry" ಎಂದು ಚಿಕ್ಕ ಮಗುವಿನಂತೇ ಅವರ ಕೆನ್ನೆಯ ಮೇಲೊಂದು ಮುತ್ತಿಡಬೇಕೆಂಬ ಬಯಕೆ ಬಯಕೆಯಾಗಿಯೇ ಉಳಿದುಹೋಗಿದೆಯೀಗ.
 

ನಿಮ್ಮಗಳ ಕಾಟವೇ ಬೇಡ, ಮಕ್ಕಳು ದೊಡ್ದವರಾಗುವಲ್ಲಿಯವರೆಗೆ ತಾವಿರಬಾರದು ಎಂದುಕೊಂಡಿರಾ ಅಪ್ಪಾ?
sorry ಅಪ್ಪಯ್ಯಾ.

ಅಜ್ಜನ ಪೆನ್ನು

ಅಜ್ಜನ ಮೇಲೆ ಅಷ್ಟೇನೂ ಪ್ರೀತಿಯಿರಲಿಲ್ಲ ನನಗೆ. ಬಹುಷಃ ಅವನ ಹತ್ತಿರ ಇರುವ ಒಂದೇ ಒಂದು ಹೀರೋ ಇಂಕ್ ಪೆನ್ನು ನನ್ನ ಆಕರ್ಷಣೆಗೆ ಕಾರಣವಾಗಿತ್ತೇನೋ ..!! ದಿನಕ್ಕೆ ಒಮ್ಮೆಯೂ ಬರೆಯುವ ಮಹಾ ಬರಗಾಲ ಅವನಿಗೇನೂ ಇರಲಿಲ್ಲ...... ಆದರೂ ಆ ಪೆನ್ನನ್ನು ಆತ ಮಕ್ಕಳಾರಿಗೂ ಸಿಗದ ಗೋದ್ರೆಜ್ ಕಪಾಟಿನ ಮೇಲಿದ್ದ ಕೂಜಳ್ಳಿ ಮಾಣಿ ಪೆಟ್ಟಿಗೆಯಲ್ಲಿಡುತ್ತಿದ್ದ.

ಒಮ್ಮೆ ಅಣ್ಣ ಆ ಪೆನ್ನನ್ನು ಕದ್ದು ತಂದು ಏನೋ ಬರೆಯುತ್ತಿದ್ದ. ನನಗೋ ಖುಷಿಯೋ ಖುಷಿ. ರಂಪ ಮಾಡಿ ಅವನಿಂದ ಇಸಗೊಂಡೆ. ನನ್ನ ದುರ್ದೈವವೋ ಎಂಬಂತೆ ನನ್ನ ಕೈಲ್ಲಿರುವುದನ್ನು
ಅಜ್ಜ ಕಂಡುಬಿಟ್ಟ.
ತಗಳಿ, ರಂಪಾಟ ಶುರುವಾಗಿದ್ದೇ ಅಲ್ಲಿಂದ.

ಸೀದಾ ಆಯಿಯಲ್ಲಿ ದೂರು. ಅಜ್ಜನಿಗೆ ನನ್ನ ಬಯ್ಯುವ ಅಥವಾ ಶಿಕ್ಷಿಸುವ ಧೈರ್ಯವಿರಲಿಲ್ಲವೋ - ನೈತಿಕತೆಯಿರಲಿಲ್ಲವೋ ಗೊತ್ತಿಲ್ಲ.... ಪ್ರತೀ ವಿಷಯಗಳಲ್ಲೂ ನನ್ನ ಮತ್ತು ಅಜ್ಜನಿಗೆ ವರಟಾಗುತ್ತಿತ್ತು.... ಆಯಿ ಚಂಡೀ ಚಾಮುಂಡಿಯಾಗಿ ಬಂದಳು.
" ಹೇಳು ಎಂತಕೆ ತೆಗ್ದೆ?" ಧುಧುಂ ... ಬಿತ್ತು ಬೆನ್ನ ಮೇಲೆ ಎರಡು. ಅದು ಹಾಗೇ  ಅಜ್ಜನ ಮೇಲಿನ ಸಿಟ್ಟಿನಿಂದ ಬಿದ್ದ ಪೆಟ್ಟುಗಳು. ಇಂದಿಗೂ ಅಂದುಕೊಳ್ಳುತ್ತೇನೆ.
ಆ ಪೆಟ್ಟು ನನಗಲ್ಲ ಅಜ್ಜನಿಗೆ.... ಮಾವನೊಬ್ಬನಿಗೆ ಸೊಸೆಯಿಂದ ಬಿದ್ದ ಪೆಟ್ಟುಗಳವು!!
ನೋವು ತಡೆಯಲಾಗಲಿಲ್ಲ. ಅಜ್ಜನ ಎದುರು ಅಳಲೂ ಒಂಥರಾ "ಮರ್ಯಾದೆ ಪ್ರಶ್ನೆ" ಎಷ್ಟೇ ತಡಕೊಂಡರೂ ಕಣ್ಣಲ್ಲಿನ ನೀರು ಉಕ್ಕಿ ಹರಿಯುವುದನ್ನು ತಡೆಯಲಾಗಲಿಲ್ಲ.
ಮೊದಲು ಸತ್ಯವೇ ಹೊರಬಿತ್ತು ನನ್ನ ಬಾಯಿಂದ. "ಅಣ್ಣ ತಂದು ಕೊಟ್ಟ. ನಾ ತೆಗದಿದ್ದಲ್ಲ , ಅಣ್ಣ".
ಆಯಿಯ ಕೈ ಅಣ್ಣನ ಮೇಲೆ ಹರಿ ಹಾಯತೊಡಗಿತ್ತು. "ಅಜ್ಜನ ಪೆ
ನ್ನು ನಿಂಗಕ್ಕೆ ಎಂತಕ್ರ, ನಿಂಗಕ್ಕೆ ಎಂತ ಪೆನ್ನಿಗೆ ಗತಿ ಇಲ್ಯ? ಆ ಪೆನ್ನ್ ಎಂತಕೆ ತೆಗ್ದೆ ಹೇಳು" ನನ್ನ ಡಬಲ್ ಪೆಟ್ಟು ಅವಂಗೆ ಬಿತ್ತು. ಬೀಳ್ತಾನೆ ಇತ್ತು.
ಆ ಸಣ್ಣ 9 ನೇ ವಯಸ್ಸಿನ ನನ್ನ ಮನಸ್ಸಲ್ಲಿ ಆಗ ಏನು ನಡೆಯಿತೆಂಬುದನ್ನು ನಾನೀಗ ವರ್ಣಿಸಲಾರೆ. ಅಣ್ಣನಿಗೆ ಬೀಳುತ್ತಿದ್ದ ಪೆಟ್ಟಿನ ನೋವಿನಿಂದ ಆದ ಅವನ ಮುಖ ನೋಡಿ ಅಯ್ಯೋ ಅನಿಸಿಹೋಗಿತ್ತು. ಪಾಪ ಅನಿಸಿತ್ತು.... ನಂಗೆ ಪೆಟ್ಟು ಬಿದ್ದರೆ ಸಹಿಸಬಲ್ಲೆ ಅಣ್ಣ ಸಹಿಸಲಾರ ಪಾಪ ಅನಿಸಿಹೋಯಿತು.....ಒಂದೇ ಸಮ ಅಳುತ್ತಲೇ ಕೂಗಿದೆ -
" ಅವಂಗೆ ಹೊಡ್ಯಡದೇ, ತೆಗ್ದದ್ದು ನಾನೇಯಾ"
ಮತ್ತೆ ಆಯಿ ನನ್ನ ಮೇಲೆ ವಕ್ಕರಿಸಿ ಮತ್ತೆರಡು ಬಾರಿಸಿ ಪೆನ್ನು ಕಿತ್ತುಕೊಂಡಳು.
ಆ ಅಳು ಸೇರಿದ ಕೂಗಿನಲ್ಲಿ ಅಣ್ಣನ ಮೇಲಿನ ವಾತ್ಸಲ್ಯವಿತ್ತಾ? ಅಥವಾ ನನ್ನ ಮನಸ್ಸು ಅಷ್ಟೊಂದು ಮುಗ್ಧವಾಗಿತ್ತಾ ? ಅಣ್ಣನ ನೋವನ್ನು ನನ್ನ ಮನಸ್ಸು ಅನುಭವಿಸುತ್ತಿತ್ತಾ ?
ಇಷ್ಟೆಲ್ಲಾ ಆದರೂ ನನಗಿಂತ 5 ವರ್ಷ ದೊಡ್ಡವನಾದ ಅಣ್ಣ ಒಂದೂ ಮಾತಾಡದಿರುವುದು ಆಗ ಆಶ್ಚರ್ಯವಾಗಿರಲಿಲ್ಲ.!! ಅವನ ಮನಸ್ಸು ಅಷ್ಟೊಂದು ಮಾಗಿತ್ತಾ? ಅಥವಾ ಆಗಲೇ ಅವನು ಬದುಕಲು ಕಲಿತಿದ್ದನಾ? ಈಗಲೂ ಉತ್ತರ ಸಿಗದ ಪ್ರಶ್ನೆಗಳು

ಚಿಕ್ಕ ಮನಸ್ಸು ಎಷ್ಟೊಂದು ಮುಗ್ಧವಾಗಿರುತ್ತದೆ, ಎಲ್ಲರ ಮೇಲೆ ಅಕ್ಕರೆ ವಾತ್ಸಲ್ಯ ಇರುತ್ತಲ್ಲ ...ಆ ಪುಟ್ಟ ಹೃದಯ ಎಲ್ಲರನ್ನೂ ವಂದೇ ತರ ನೋಡುತ್ತಲ್ಲ..... ಮಕ್ಕಳಿದ್ದಾಗ ನಮಗೆ ಹಿರಿಯರು ಬಯ್ದಿದ್ದಕ್ಕೆ ನಾವು ಬೇಸರಪಟ್ಟುಕೊಂಡಿದ್ದಿಲ್ಲವಲ್ಲ !! ಈಗ ಯಾಕೆ ಬೇಜಾರಾಗುತ್ತದೆ?? !!


ಜೊತೆಗೇ ವಂದೇ ರಕ್ತ ಹಂಚಿಕೊಂಡು ಹುಟ್ಟಿದ ತಮ್ಮದೇ ಕರುಳಿನ ಕುಡಿ... ಮೊಮ್ಮಕ್ಕಳಿಗೆ ಕೊಡುವ ಪ್ರೀತಿಯಲ್ಲೂ ತಾರತಮ್ಯ ಇರಬಹುದಾ ಎಂಬ ಸಂಶಯವೂ ಇದೆ. ಕೇಳುವುದ್ಯಾರಲ್ಲಿ ??!!

ಅಪಶಕುನ

ಪ್ಪನಿಗೆ ಅಷ್ಟೇನೂ ವಯಸ್ಸಾಗಿರಲಿಲ್ಲ, ಆದರೆ 36 ನೇ ವಯಸ್ಸಿನಿಂದ ಕಾಡಿದ ಡಯಾಬಿಟೀಸ್, ಬಿ.ಪಿ. ಅವರನ್ನು ಹಣ್ಣಾಗಿಸಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಕಾಲಿನ ಗಾಯದ ಆಪರೆಶನ್ನಿಗಾಗಿ ಮಲಗಿದ್ದರು. ನಾನು ಪಿ.ಯು.ಸಿ. ಓದುವ ಹುಡುಗ ಆಗ. ಮನೆಯಲ್ಲಿ ಇದ್ದೆ.
ಅಮ್ಮ ಹೇಳಿದ್ದಳು "ದಿನಾ ಸಂಜೆ ದೇವರ ದೀಪ ಮಾತ್ರ ತಪ್ಪಿಸಡ ತಮಾ"
ಅದರಂತೆ ಆ ದಿನ ಕೂಡ ದೀಪ ಹಚ್ಚುತ್ತಲಿದ್ದೆ. ಅಪ್ಪ ನೆನಪಾದರು. ಅಪ್ಪ 'ನಮ್ಮ ಬಿಟ್ಟು ಹೋಗಿಬಿಟ್ರೆ' ಎಂಬ ಭಯ ಮೂಡಿ ಕಣ್ಣೀರು ಬಂತು.

"ದೇವರೇ ನನ್ನ ಭವಿಷ್ಯ ಹಾಳಾದರೂ ಚಿಂತಿಲ್ಲ - ಅಪ್ಪನ ಬದುಕಿಸು" ಎಂದೇ ಬೇಡಿದೆ.
ಕಣ್ಣೀರಿನ ಒಂದು ಹನಿ ದೀಪದ ಮೇಲೆ ಬಿದ್ದು ದೀಪ ಇನ್ನೇನು ಆರಿತು ಎಂದು ಕಳವಳಗೊಳ್ಳುವಷ್ಟರಲ್ಲಿ ಮತ್ತೆ ಉರಿಯಿತು. ಸಮಾಧಾನದ ನಿಟ್ಟುಸಿರು ಬಿಟ್ಟೆ. ಅಪ್ಪ ಒಂದೇ ವಾರದಲ್ಲಿ ಮನೆಗೆ ಬಂದರು -
ಆದರೆ ಆ ವರ್ಷದ ಪರೀಕ್ಷೆಯಲ್ಲಿ ನಾ ಫೇಲಾದೆ !!!.

5-6 ವರ್ಷಗಳ ನಂತರ ಮತ್ತೆ ಅಪ್ಪನ ಸ್ಥಿತಿ ಹದಗೆಟ್ಟಿತು, ಈ ಸಲ ಹೃದಯಾಘಾತ. ಹೃದಯ ಚಿಕಿತ್ಸೆಗಾಗಿ (open heart surgery) ಮಂಗಳೂರಿಗೆ ಹೋಗುವ 2 ದಿನ ಮುಂಚೆ ಅ
ಮ್ಮ ಹೇಳಿದಳು
"ತಮಾ ಆ ಕೆಲಶಿಗೆ ಹೇಳಿಕ್ಕಿ ಬಾ, ಅವರ ಕೂದಲು ಕಟ್ ಮಾಡ್ಸವಡ".
ನಾನು ಯಾವ್ದೋ ಕೆಲಸದ ನಿಮಿತ್ತ ಬೆಳಗಿನ ವೇಳೆಯಲ್ಲಿ ಹೋಗಲಾಗಲಿಲ್ಲ, ಸಂಜೆ ಹೊರಟಾಗ ಅಮ್ಮ ಬೇಡ ಅಂದರೂ ಕೇಳದೆ ಹೋಗಿ ಹೇಳಿ ಬಂದೆ. (ಹಳ್ಳಿಗರು ಸಂಜೆಯ ಸಮಯದಲ್ಲಿ ಕೆಲಶಿಯ ಕರೆಯುವುದು ಬಿಡಿ, ಮಾತನ್ನಾಡಿಸುವುದೂ ಇಲ್ಲ, ಅದು ಮೂಢನಂಬಿಕೆ) ಮರುದಿನ ಕೆಲಶಿ ಬಂದು ಮುಂಡನ ಮಾಡಿ ಹೋದ.
ಆಗೇ ಸುಮಾರು ದಿನಗಳಿಂದ ಸುಟ್ಟಗಣ್ಣ ಹಕ್ಕಿ (ಒಂದು ರೀತಿಯ ವಿಚಿತ್ರ - ಭಯಗೊಳಿಸುವ ಧ್ವನಿಯಲ್ಲಿ ಕೂಗುವ ಹಕ್ಕಿ ಎಂದು ಅಮ್ಮ ಹೇಳಿದ್ದು - ನಾ ಕೇಳಿದ್ದು, ನೋಡಿಲ್ಲ) ಪದೇ ಪದೇ ಕೂಗುತ್ತಿತ್ತು. ಅದು ಕೂಗಿದರೆ ಯಾರಿಗೋ ಪ್ರಾಣಭಯವಿದೆ ಎಂಬರ್ಥವಂತೆ.

ಅದೇ ಮರುದಿನ ಮಂಗಳೂರಿನ ಆಸ್ಪತ್ರೆಗೆ ಅಪ್ಪನನ್ನು ಕರೆದುಕೊಂಡು ಹೋಗಿ - ಆಪರೇಶನ್ ಮುಗಿದಿದೆ ಎಂದು ಡಾಕ್ಟರು ಹೇಳಿದಾಗ ನಾವೆಲ್ಲ ಸರಿಯಾಗಿ ಉಸಿರಾಡಿದ್ದೆವು. ಆದರೆ ವಿಧಿ ಲಿಖಿತ ಏನಿತ್ತೋ ಬಲ್ಲವರಾರು?. ಅಪ್ಪ ಚೇತರಿಸಿಕೊಳ್ಳಲಿಲ್ಲ. ಪೂರಾ 18 ಬಾಟಲು ರಕ್ತ ಕೊಟ್ಟರೂ ಅಪ್ಪನ ರಕ್ತಸ್ರಾವ ನಿಲ್ಲಲಿಲ್ಲ. ಮತ್ತೆ ದುಗುಡ ನಮ್ಮನ್ನಾವರಿಸಿತ್ತು. ಮರುದಿನ ಬೆಳಿಗ್ಗೆ ಅಲ್ಲೇ ಪಕ್ಕದ ಗಣೇಶನ ಗುಡಿಗೆ ಅರ್ಚನೆ ಮಾಡಿಸಲೆಂದು ಹೋದೆವು ನಾನು - ಅಮ್ಮ ಜೊತೆಯಲ್ಲಿ ಅಣ್ಣ. ಗುಡಿಯಲ್ಲಿ ಪೂಜೆಯ ವೇಳೆ ಭಟ್ಟರು ತೆಂಗಿನ ಕಾಯಿ ಒಡೆಯುವಾಗ ಒಂದು ಕಾಯಿಕಡಿ ಮಗುಚಿ ಬಿತ್ತು. ತಕ್ಷಣ ನಾನು ಅಮ್ಮನ ಮುಖ ನೋಡಿದ್ದೂ - ಅಮ್ಮ ಅಣ್ಣನಮುಖ ನೋಡಿದ್ದೂ -ಅಣ್ಣ ನನ್ನ ಮುಖ ನೋಡಿದ್ದೂ ಆಗಿ ಹೋಯಿತಲ್ಲ. ಇದು ಮನಸ್ಸಿನ ಭ್ರಮೆಯೇ?
ಮರುದಿನ ಅಪ್ಪ ನಮ್ಮನ್ನಗಲಿದರು .ಆಯಿ ಅಳಲಿಲ್ಲ. "ತಮಾ ಬೆಳಗ್ಗೆನೇ ಗೊತ್ತಾಗಿತ್ತು ಬಿಡು" ಅಂದಳಷ್ಟೇ.
ಈಗ ಯೋಚಿಸುತ್ತಿದ್ದೇನೆ....
ಈ ಮೂಢನಂಬಿಕೆಗಳು ನಿಜವಾ? ನಂಬಲಹ್ರವಾ? ಆ ಹಕ್ಕಿ ನಿಜವಾಗಲೂ ಅಪಶಕುನದ ಹಕ್ಕಿಯಾ? ತೆಂಗಿನ ಕಾಯಿ ಮಗುಚಿಬೀಳುವುದೂ ಒಂದು ಪೂರ್ವ ಸೂಚನೆಯಾ?? ಪೂರ್ವಜರು ತಮ್ಮ ಅನುಭವದಿಂದ ಈ ಎಲ್ಲ ನಂಬಿಕೆಗಳನ್ನು ಪಾಲಿಸಿಕೊಂಡು ಬಂದಿದ್ದರಾ? ನಾನು ಫೇಲಾಗಲು - ಅಪ್ಪ ನ ಸಾವಿಗೆ ಅವೆಲ್ಲ ಮುನ್ಸೂಚನೆಗಳಾಗಿದ್ದವಾ? ಅಗೋಚರ ಶಕ್ತಿಯೊಂದು ಇಡೀ ಜ
ಗದ ಜೀವಕೋಟಿಯ ನಿಯಂತ್ರಿಸುತ್ತಿದೆಯಾ? ಒಂದೂ ಅರ್ಥವಾಗುತ್ತಿಲ್ಲ.

ದಾಡ್ ಪೀಡ್

ಸೋ ಅ೦ತ ಮಳೆ ಸುರಿಯುತ್ತಿತ್ತು. ಗೋಪಾಲಭಟ್ಟರು ತಾಳಿಸಿದ ಹಲಸಿನ ಕಾಯಿ ಹಪ್ಪಳ, ಕಾಯಿಬಾಗ ಮೆಲುಕಾಡಿಸುತ್ತಮಳೆಯನ್ನು ನಿಲ್ಲಿಸಲು ಸಾಧ್ಯವಿದೆಯೇ ನೋಡಿದರು.ಮನೆಯ ಹೆ೦ಗಸರು- ಮಕ್ಕಳೆಲ್ಲ ಹೊಳ್ಳಿಯ ಮೇಲೆ ಕ೦ಬಳಿ ಹೊದ್ದುಕೊ೦ಡು ಕತೆ ನಡೆಸಿದ್ದರು. ಭಟ್ಟರ ಅಜ್ಜಿ - ಮುದುಕಿ - ಬೇಜಾರಿಲ್ಲದೇ ಕಾಕಣ್ಣ ಗುಬ್ಬಣ್ಣನ ಕತೆಯನ್ನು ಹೇಳುತ್ತಿದ್ದಳು. ಮಳೆ ಹೊಳವಾಗುವ ಲಕ್ಷಣವೇ ತೋರಲಿಲ್ಲ.
ಅ೦ತೂ ತೋಟಕ್ಕೆ ಹೋಗಿ ಕಾರಿಗೆಗಳಲ್ಲಿ ನೀರು ನಿ೦ತಿತೋ ಹೇಗೆ, ಬರಣಗಳಲ್ಲಿ ನೀರು ನೆಲೆಸಿ ಮರದ ಬುಡಕ್ಕೆ ಹಾಕಿದ ಗೊಬ್ಬರಗಳನ್ನು ತೊಳೆಯಿತೋ ಹೇಗೆ - ಎ೦ದು ನೋಡಿಕೊ೦ಡೂ ಬರಲೂ ಸಾಧ್ಯವಿಲ್ಲವೆ೦ದು ಅವರಿಗೆ ತೋರಿತು. ಏನೇ ಆದರೂ ಇ೦ದು ಸೋರಕಾಲ ಆಚೆಗೆ ಕಾಲು ಹಾಕುವುದೇ ಇಲ್ಲವೆ೦ದು ನಿಶ್ಚಯಿಸಿ ಕವಳ ಜಗೆದರು. ಕೊಟ್ಟೆಕಡ್ಡಿ ಕೆತ್ತಲೂ ಮನಸ್ಸಾಗಲಿಲ್ಲ. ಇನ್ನೇನು ಮಾಡುವುದು? ಕೇರಿಯ ಗ್ರಾಸ್ತರೂ ಮನೆ ಬಿಟ್ಟು ಹ೦ದುವ೦ತಿಲ್ಲ. ಒ೦ದು ಪ್ರಸ೦ಗ ಮಾಡಲಿಕ್ಕೆ, ಒ೦ದು ಗಡದ್ದಾದ ಇಸ್ಪೀಟಿನ ಆಟ ಆಡಲಿಕ್ಕೆ ಅ೦ತಹ ದಿನ ಬೇರೆ ಸಿಗಲಿಕ್ಕಿಲ್ಲ ಅ೦ತ ಅವರಿಗೆ ಅನಿಸಿತು.

ಗಿಳಿಗುಟ್ಟಕ್ಕೆ ನೇತುಹಾಕಿದ ಮೃದ೦ಗವನ್ನೇ ಅವರು ಕೊನೆಗೆ ಮೊರೆ ಹೋಗಬೇಕಾಯಿತು. ತಮ್ಮಷ್ಟಕ್ಕೇ ತಾವೇ ಹಾಡಿಕೊಳ್ಳುತ್ತ ಬಾರಿಸಹತ್ತಿದರು. ಮಕ್ಕಳು ಕತೆಯನ್ನು ಬಿಟ್ಟು ಭಟ್ಟರ ಹತ್ತಿರ ಬ೦ದು ಕುಳಿತರು. ಮಳಯ ಸದ್ದನ್ನು ಮೀರಿಸಿ ಮೃದ೦ಗ ಧು೦ ಧೋ೦ಗುಡಹತ್ತಿತು.

ಕೇರಿಯ ಗ್ರಾಸ್ತರಿಗೂ ಇದೇ ಬೇಕಾಗಿತ್ತು. ಗೋಪಾಲಭಟ್ಟರ ಮನೆಗೆ ಹೋಗಿ ಒ೦ದು ಇಸ್ಪೀಟಿನ ಆಟವನ್ನಾದರೂ ಜಪ್ಪುವ ಎ೦ದು ಅವರು ವಿಚಾರಿಸುತ್ತಿದ್ದರು. ಆದರೆ ಮಳೆಯಲ್ಲಿ ಹೊರಡುವುದು ಯಾರಿಗೂ ಬೇಡವೆನಿಸಿತು.ಅಷ್ಟು ತ್ರಾಸು ತೆಗೆದುಕೊ೦ಡು ಹೋದರೆಭಟ್ಟರು ಮನೆಯಲ್ಲಿ ಇಲ್ಲದಿದ್ದರೆ,.... ಅದಕ್ಕಿ೦ತ ಬೆಚ್ಚಗೆ ಕೂತುಕಳ್ಳವುದೇ ಆರಾಮು ಎ೦ದು ಅ೦ದುಕೊ೦ಡು ಕವಳ ಜಗೆಯುತ್ತಿರುವಾಗ ಮೃದ೦ಗದ ಧಿಕತೋ೦ಕೇಳಿಸಹತ್ತಿತು. ಅದನ್ನು ಕೇಳೀ ಸುಮ್ಮನೆ ಕೂತುಕೊಳ್ಳುವುದು ಸಾಧ್ಯವೇ?
ಒಬ್ಬೊಬ್ಬರು ಒ೦ದೊ೦ದು ಪದ ಗುಣುಗುತ್ತ ಕ್ರಮವಾಗಿ ಭಟ್ಟರ ಮನೆಗೆ ಬರಹತ್ತಿದರು. "ರಾಜರ್ ರಾಜನು ಬ೦ದ" ಅನ್ನುತ್ತ ಶ೦ಕರ ಭಟ್ಟರು ಕ೦ಬ್ಳೀಕೊಪ್ಪೆ ಸೂಡಿಕೊ೦ಡು ಬ೦ದರು. ಸಣ್ಣಪ್ಪನ೦ತೂ ತೋಯಿಸಿಕೊ೦ಡೇ ಓಡಿಬ೦ದ. "ಕೇಳೀ ಕೇಳೀ ಬಾರದಿರಬಹುದೇ l ಮೃದ೦ಗವ ಕೇಳೀ ಕೇಳೀ......." ಅನ್ನುತ್ತ ಸುಬ್ಬಾಭಟ್ಟರು ಕಾವಿನ ಕೊಡೆ ಹಿಡೀದು ಆಗಮಿಸಿದರು. ಎಲ್ಲರಿಗಿ೦ತ ಚುರುಕಾಗಿ ದಮ್ಡಿ ರಾ೦ ಭಟ್ರೂ ಮಳೆಗೆ ಕೈಗಳನ್ನು ಸೂಡಿಕೊ೦ಡು "ಪ್ರಸ೦ಗ್ವೋ ನೋಡ್ತೆ? " ಅನ್ನುತ್ತ ಹಾಜರಾದರು.
ಗೋಪಾಲ ಭಟ್ಟರಿಗೆ ’ಇನ್ನು ಬೇಕಾದ ಹಾಗೆ ಮಳೆ ಹೊಯ್ಯಲಿ’ ಅನ್ನಿಸಿಬಿಟ್ಟಿತು. "ಹೋಯ್ ಬನ್ನಿ" ಅನುತ್ತ ಗ್ರಾಸ್ತರನ್ನೆಲ್ಲ ಸ್ವಾಗತಿಸಿ ಕ೦ಬಳಿ ಹಾಸಿದರು. ಪ್ರಸ೦ಗ ಮಾಡಬೇಕೋ ಇಸ್ಪೀಟು ಆಡಬೇಕೋ ಎ೦ದು ಚರ್ಚೆಯಾಯಿತು.

ಕೊನೆಗೆ ಇಸ್ಪೀಟಿಗೇ ಬಹುಮತ ಬಿತ್ತು ಭಟ್ಟರು ತಮ್ಮ ಮಾಣಿಯನ್ನು ಕಳುಹಿಸಿ ಶಿವರಾ೦ ಭಟ್ಟರ ಮನೆಯಿ೦ದ ಇಸ್ಪೀಟಿನ ಪಟ್ಟು ತರಿಸಿದರು. ಇಷ್ಟು ಹೊತ್ತು ಮುದುಡಿಕೊ೦ಡು ಕುಳಿತ ಮಾಣಿಗೆ ಇಸ್ಪೀಟಿನ ಆಟ ನೋಡುವ ಉತ್ಸಾಹ ಬ೦ದು ಮಳೆಯನ್ನು ಲೆಕ್ಕಿಸದೇ ಓಡಿಹೋಗಿ ತ೦ದ.

ಭಟ್ಟರು ಒ೦ದು ತಪ್ಪಲೆ ತು೦ಬ ಚಹ, ಒ೦ದು ಹರಿವಾಣ ತು೦ಬ ಅವಲಕ್ಕಿ, ಒಬ್ಬರಿಗೆ ಎರಡೆರಡು ತಾಳಿಸಿದ ಹಪ್ಪಳ ತರಿಸಿದರು. ಬೆಚ್ಚಗೆ ಚಹ ಕುಡಿದು ’ದಾಡು ಪೀಡು’ ಆಡಲು ಸುರು ಮಾಡಿದರು.

ನಡುನಡುವೆ ಜಗೆಯುವ ಕವಳಕ್ಕಾಗಿ ಇಡೀ ಒ೦ದು ಹೊಗೆಸೊಪ್ಪು, ಶಿಲ್ಕು ಇದ್ದ ಎಲ್ಲಾ ಬೀಡಿಗಳು ಪುಡಿಯಾದವು.

ಮಳೆ ಹೊಳವಾಯಿತು. ಭಟ್ಟರ ತಾಯಿ " ಮಳೆ ಹೊಳ್ವಾತು ಇನ್ನು ತೋಟಾ ತಿರ್ಗಾಡ್ಕ೦ಡು ಬಪ್ಲೆ ಅಡ್ಡಿಲ್ಲೆ" ಎ೦ದು ಸೂಚಿಸಿದಳು. "ತೋಟ್ದ ಕೆಲ್ಸ ಯಾವಾಗ್ಲೂ ಇದ್ದದ್ದೇಯಾ. ಇ೦ಥಾ ಆಟ ಬಿಟ್ಟಿಕ್ಕಿ ಹೋಪ್ಲೆ ಮಳ್ ಹಿಡದ್ದಿಲ್ಲೆ" ಎನ್ನುತ್ತ ಭಟ್ಟರು" ಅಮ್ಟು (out)....... ಜೋನ್ ಅಮ್ಟು" ಹೊಡೆದರು.

ಮಧ್ಯದಲ್ಲಿ ಅಡಿಕೆಯ ಸೊಕ್ಕು ಏರಿ ಶ೦ಕರ ಭಟ್ಟರಿಗೆ ತಲೆ ತಿರುಗಹತ್ತಿತು. ಅವರಿಗಾಗಿ ಒ೦ದು ತಟ್ೆ ಹುಳಿಮಜ್ಜಿಗೆಯನ್ನು ಭಟ್ಟರ ಹೆ೦ಡತಿ ತ೦ದು ಕೊಟ್ಟಳು. ಅವರಿಗೆ ಒಬ್ಬರಿಗೇ ಏಕೆ? ಎಲ್ಲರಿಗೂ ಒ೦ದೊ೦ದು ತಟ್ಟೆ ಮಜ್ಜಿಗೆ ಬೆರೆಸಿಕೊ೦ಡು ಬ೦ದರೆ ಬಹಳ ವಳ್ಳೆಯದಾಗುವುದೆ೦ದು ಭಟ್ಟರು ಮಡದಿಗೆ ಹೇಳಿದರು.

ಆಟದ ನಡುವೆಯೇ ಮಜ್ಜಿಗೆಯನ್ನು ಕುಡಿದರು. ಸ೦ಜೆಯಾಯಿತು. ದೀಪ ಬ೦ತು. ಕಡೆಯ ಆಟ ಹೂಡಿದರು. ಭಟ್ಟರ ಮಾಣಿ ರೂಢಿಯ ಪ್ರಕಾರ ಮು೦ಚೇ ಎಲ್ಲರಿಗೂ ಸೂಡಿಗಳನ್ನು ತ೦ದು ಬಾಗಿಲ ಬಳಿಗೆ ಇಟ್ಟಿದ್ದ.

ಆಟ ಮುಗಿಯುವುದರೊಳಗೆ ಊಟಕ್ಕೆ ಆಯಿತೆ೦ದು ಅಡಿಗೆಯ ಮನೆಯ ನೋಟೀಸನ್ನು ಒ೦ದು ಕೂಸು ತ೦ದಿತು. ಕಾಲು ತೊಳೆದುಕೊಳ್ಳಲು ನೀರಿನ ಚೊ೦ಬುಗಳು ಬ೦ದವು. ಭಟ್ತರು ಎಲ್ಲರಿಗೂ "ಇಲ್ಲೇ ಉ೦ಡ್ಬುಡ್ವೋ. ಉ೦ಡಾದ್ಮೇಲೆ ಬೇಕಾರೆ ಒ೦ದ್ ತಾಸು ಕುಟ್ವೋ" ಅ೦ದರು. "ಛೆ ಛೆ. ಮನೆಗೆ ಹೋಪ್ದೇಯ" ಅನ್ನುತ್ತ ಎಲ್ಲರೂ ಸೂಡಿ ಹಚ್ಚಿ ಹೊರಟರು. ಭಟ್ತರ ಮನೆಯಲ್ಲಿ ಕೆಲವರಿಗಾಗಿ ಅಡಿಗೆಯಾಗಿತ್ತು. ಎಲ್ಲರೂ ಹೊರಡುವುದನ್ನು ನೋಡಿ ಭಟ್ತರ ಹೆ೦ಡತಿ "ಅತೋ! ಎಲ್ಲರೂ ಹೊರ್ಟ್ವಲಿ. ಯಾ ನಿ೦ಗೊಕ್ಕೆಲ್ಲಾ ಅನ್ನ ಮಾಡಿಕಿದೆ" ಅ೦ದಳು. ಭಟ್ಟರೂ ಒತ್ತಾಯ ಮಾಡಿದರು. ಯಾರೂ ನಿಲ್ಲಲಿಲ್ಲ. ಮನೆಯಲ್ಲಿ ಮತ್ತೆ ಆರೆ೦ಟೇ ಜನರಾದರು. ಭಟ್ತರಿಗೆ ಭಣ ಭಣ ಅನಿಸಿತು. ಎಷ್ಟು ಒತ್ತಾಯ ಮಾಡಿದರೂ ನಿಲ್ಲಲಿಲ್ಲವೆ೦ದುಕೊ೦ಡು ಅವರು ತುಸು ಬೇಸರ ವ್ಯಕ್ತ ಮಾಡಿದರು. ನೆರೆಹೊರೆಯವರು ಅತಿಥಿಗಳಾದರೆ ಯಜಮಾನನಿಗೆ ಒ೦ದು ಬಗೆಯ ಹೌಸು.

ಸೂಡಿ ಬೀಸುತ್ತ ಹೊರಟ ಗ್ರಾಸ್ತರು ದಾರಿಯ ಮೇಲೆ ಆಡಿಕೊಳ್ಳಹತ್ತಿದರು. "ನೋಡ್ದ್ಯಾ ಗೋಪಾಲಭಟ್ಟ ! ಎ೦ಥಾ ಪಕ್ಕಾ ! ಸೂಡಿ ತರ್ಸಿಟ್ಟು ವಳ್ಕಳೀ ಹೇಳಿ ವತ್ತಾಯ ಮಾಡ್ತ !"
"ಭಾರೀ ಪಕ್ಕಾ ಮನ್ಶಾ ಅವ. ನೋಡ್ದ್ಯ, ಸಕ್ರೆನೇ ಹಾಕದ್ದೇ ಚಪೆ ಚಾ ಕುಡೀಸ್ದ."
"ಚಾಕ್ಕ೦ತೂ ಸಕ್ರೆ ಕಮ್ಮಿ ಹೇಳು. ಅವಲಕ್ಕಿಗ ಒ೦ದ್ ಹನಿ ಬೆಲ್ಲಾನಾದ್ರೂ ಹಾಕವೋ ಬೇಡ್ದೋ"
" ಆ ಮಜ್ಗೆ ಥೇಟು ಬಿಳೀ ನೀರು ! ಅಲ್ಲ ಸೊಲ್ಪ ಕಮ್ಮಿ ನೀರ್ ಹಾಕಿ ಬೆರ್ಸಿದ್ರೆ ಅವ್ನ ಮನೆ ತೊಳ್ದ್ ಹೋಗ್ತಿತ್ತಾ ?"
ಸೂಡಿಗಳು ಉರಿಯುವ ವರೆಗೂ ಇ೦ಥ ಮಾತುಗಳು ನಡೆದವು.

ಸರದಾರ

ಸರದಾರರ ಮೇಲಿನ ಜೋಕುಗಳು ಚುಟಕುಲೆಗಳು ಮತ್ಯಾವ ಜಾತಿ ಜನಾಂಗದ ಮ್ಯಾಲೂ ಇರದು. ಸಂತಾ ಬಂತಾ ನ  ಹಾಸ್ಯ ಚಟಾಕಿಗಳು ಬಹಳ. ಆದರೆ ಅದೇ ಈ ಸರದಾರರ ಬಗ್ಗೆ ನಮಗೆಷ್ಟು ಗೊತ್ತು? ಅವು ಏನು?  ಮೊನ್ನೆ ಮೊನ್ನೆ... ಫೇಸ್ ಬುಕ್ ನಲ್ಲಿನ  ಸರದಾರನ ಮೇಲಿನ ವಂದು ಹಂಚಿಕೆ (share) ನನ್ನ ಹಳೆಯ ನೆನಪುಗಳ ಮೆಲುಕು ಹಾಕಿಸಿದ್ದಂತೂ ಹೌದು.ಈ ಐದಾರು ವರ್ಷದ ನನ್ನ ಉತ್ತರ ಭಾರತದ ವೃತ್ತಿ ಜೀವನದಲ್ಲಿ ಕಂಡು ಕೇಳಿದ ಸರದಾರರ ಸತ್ಯಗಳಿವು. 

ಈ ಸರದಾರರು ಮುಖ್ಯವಾಗಿ ಸಿಖ್ ಸಮೂದಾಯಕ್ಕೆ ಸೇರಿದವರು. ಸಿಖ್ ಎಂಬ ಪಂಥ ಹಿಂದೂ ಮುಸ್ಲಿಂ ಸಮ್ಮಿಳಿತ ಜನಾಂಗ. ಬಹುಶಃ ಗುರು ನಾನಕರ ಉದ್ದೇಶವೇ ಅದಿತ್ತೋ ಏನೋ... ಹಿಂದೂ ಮುಸ್ಲಿಂರನ್ನು ಒಂದೇ ಸೂರಿನಡಿಯಲ್ಲಿ ತರುವ ಪ್ರಯತ್ನದ ಫಲವೇ ಇನ್ನೋಂದು ಸಿಖ್ ಎಂಬ ಜನಾಂಗದ ಉಗಮಕ್ಕೆ ಕಾರಣವಾಯಿತು ಎನ್ನಬಹುದು. ಈ ಸಿಖ್ ಪಂಥಿಗರು ದೇವಸ್ಥಾನಗಳಿಗೂ ಹೋಗುತ್ತಾರೆ... ಹಾಗೆಯೇ ಮಸೀದಿ ದರ್ಗಾಗಳಿಗೂ ಹೋಗುತ್ತಾರೆ. ಗುರುದ್ವಾರಗಳಲ್ಲೂ ಮಾಥಾ ಠೇಕನಾ ಮಾಡುತ್ತಾರೆ ಕೂಡ. ಇವರ ಹಾವ ಭಾವ ಮತ್ತು ಉಡುಪು ಬದುಕಿನ ಪದ್ದತಿ ನೋಡಿ. ಮುಸ್ಲಿಮರ ಮುಲ್ಲಾಗಳ ತರ ಗಡ್ಡ ಬಿಡುತ್ತಾರೆ. ಮುಸ್ಲಿಮರಲ್ಲಿ ಒಂದು ಮುಷ್ಠಿಯಾಗುವಷ್ಟು ಗಡ್ದ ಬಿಡುವುದು ಪದ್ದತಿಯಾದರೆ... ಸಿಖರಲ್ಲಿ ಗಡ್ಡಕ್ಕೆ ಮತ್ತು ತಲೆಯ ಕೂದಲಿಗೆ  ಕತ್ತರಿ ಮತ್ತು ಹಣಿಗೆ ತಾಗಿಸದಿರುವುದೇ ಪದ್ದತಿ. ಕಟ್ಟಾ ಸಿಕ್ಕನೊಬ್ಬ ಕತ್ತರಿ ಮತ್ತು ಹಣಿಗೆಯನ್ನು ಕೈಯಿಂದ ಮುಟ್ಟುವುದಿಲ್ಲ*. ಹೀಗೆಯೇ ಹಿಂದೂ ಮುಸ್ಲಿಮರ ಎಷ್ಟೋ ಬಗೆಯ ರೀತಿ ರಿವಾಜುಗಳು ಇವರಲ್ಲಿವೆ. ಇವರು ತಲೆಗೆ ಪೇಟ ಸುತ್ತಿಕೊಳ್ಳುವ ಉದ್ದೇಶ ತಲೆಯ ಮೇಲಿನ ಆ ಕೂದಲಿನ ಮುಡಿಯನ್ನು ಮುಚ್ಚಿಡಲೇ ಆಗಿರಬಹುದು.. 

ಈ ಸರದಾರರು ತುಂಬ ಕಷ್ಟವಾನಿಗಳು. ವಿವಿಧತೆ ಮತ್ತು ಪರಿವರ್ತನೆಗೆ ಹೊಂದಿಕೊಂಡ ಜನಾಂಗ.ವಿಭಜನೆಯ ಸಂದರ್ಭದಲ್ಲೂ ತಮ್ಮತನವನ್ನು ಕಾಪಾಡಿಕೊಂಡು ಬದುಕುಳಿದ ಕಷ್ಟ ಸಹಿಷ್ಣುಗಳು. ಸಂದರ್ಭ ಬಂದರೆ ಸರ್ದಾರ್ಜಿಯೊಬ್ಬ ಲಾರಿ ಓಡಿಸುತ್ತಾನೆ ಅಥವ ರಸ್ತೆಯ ಪಕ್ಕದಲ್ಲೇ ವಂದು ಗ್ಯಾರೇಜೋ ಡಾಭಾನೋ ತೆರೆಯುತ್ತಾನೆ.... ಹಣ್ಣಿನಂಗಡಿ ನಡೆಸುತ್ತಾನೆ.. ಬಡಗಿಯ ಕೆಲಸ ಮಾಡಬಲ್ಲ .. .ಆದರೆ ಭಿಕ್ಷೆ ಯೆತ್ತಲಾರ.! ವಂದು ಸಮೂದಾಯದ  ಸಫಲತೆಯ ಹಿಂದಿರುವ ಗುಟ್ಟೇ ಅದು .. ಅವರಲ್ಲಿರುವ ಯಾವುದೇ ಕೆಲಸವನ್ನು ತನ್ಮಯತೆಯಿಂದ, ಪ್ರೀತಿಯಿಂದ, ಗೌರವದಿಂದ ಮಾಡುವ ಮನೋಭಾವ. ಯಾವ ಕೆಲಸವೂ ಕೀಳಲ್ಲ ಎಂಬ ಮನೋಭಾವ. 

ಹುಂ ಮತ್ತೊಂದು ಮಾತು.... ಯಾವಾಗಲಾದರೂ ನೀವು ಸಿಗರೇಟ್ ಸೇದುತ್ತಿರುವ ಅಥವಾ ತಂಬಾಕು ತಿನ್ನುತ್ತಿರುವ ಅಥವಾ ಯಾವುದೇ ಚಟ ಹೊಂದಿರುವ ಸರದಾರನ ಕಂಡಿದ್ದೀರಾ?? ಇವರಿಗಿರುವ ವಂದೇ ವಂದು ಚಟ ಅಂದರೆ ಊಟ. ಸರದಾರನೊಬ್ಬ ಕುಂತ ಬೈಟಕ್ ನಲ್ಲಿ ೧೫ ರಿಂದ ೨೦ ರೊಟ್ಟಿ ಇಳಿಸಬಲ್ಲ. ಇದೇ ಕಾರಣಕ್ಕೆ ಹೇಳುವುದು. ... ಭಾರತದಲ್ಲಿ ಪಂಜಾಬಿನ ಗಂಡು... ಕೇರಳದ ಹೆಣ್ಣು ಗಟ್ಟಿ. ನಿಜವಾಗಲೂ ಸತ್ಯದ ಮಾತು ಅದು. ದೇಹದಾರ್ಢ್ಯತೆಗೆ ಹೆಸರೇ ಸರದಾರ. (ಕೇರಳದ ಹೆಮ್ಮಕ್ಕಳೂ ಕೂಡ ಮೈ ಮಾಟದಲ್ಲಿ ಅವರ ಮೀರಿಸುವರ್ಯಾರು?? ಬಣ್ಣ ಬಿಡಿ) 


ಸರದಾರರ ಬಗೆಗಿನ ಬೆಚ್ಚಿಬೀಳಿಸುವ ವಿವರಗಳ ನೋಡಿ: ನಮ್ಮದೇಶಕ್ಕೆ ಸರ್ದಾರ್ಜಿಗಳ ಒಟ್ಟೂ ಕೊಡುಗೆ -
* 33% ಆದಾಯ ಕರ ಕೊಡುವ ಏಕೈಕ ಸಮೂದಾಯ.

* 67% ದಾನ (charity)
* 45% ಭಾರತೀಯ ಸೇನೆಯಲ್ಲಿ ಸರದಾರರು
* 59,000++ ಗುರುದ್ವಾರಗಳು ಪ್ರತಿದಿನ ಒಟ್ಟೂ  5,900,000+ ಜನರಿಗೆ  ’ಲಂಗರ್’ **
(ಅನ್ನದಾನ) ಎಂಬ ಹೆಸರಿನಲ್ಲಿ  ಊಟ ಬಡಿಸುತ್ತದೆ.  
ಇವೆಲ್ಲ ವಿಶೇಷತೆಯುಳ್ಳ ವಂದು ಸಮೂದಾಯದ ಒಟ್ಟೂ ಜನಸಂಖ್ಯೆ ಭಾರತದ ಜನಸಂಖ್ಯೆಯ ಕೇವಲ 1.4% 

ಆಶ್ಚರ್ಯವಲ್ಲವೇ ?? 


ಇವೆಲ್ಲ ಸರಿ ಸರದಾರರ ಬಗ್ಗೆ ಇಷ್ಟೊಂದು ಮಾಹಿತಿ ಸಿಕ್ಕಿದ್ದೇನೋ ಸರಿ ಒಂದು ವಿಷಯ ಇನ್ನೂ ನಿಗೂಢವಾಗಿಯೇ ಇದೆ.. 

"ಸರದಾರಕೋ ಬಾರಾ ಕ್ಯೋಂ ಬಜತಾ ಹೈ?" ***

ಈ ಸಿಖ್ ಸರದಾರರ ವಿಷಯದಲ್ಲಿ ನಾ ಕಂಡು ಅನುಭವಿಸಿದ ಕೆಲ ಅಪರೂಪದ ಕುತೂಹಲಕಾರೀ ಅನುಭವಗಳನ್ನು ಹಂಚಿಕೊಳ್ಳಲೇಬೇಕು. 
 
ಒಮ್ಮೆ ಪಂಜಾಬಿನ ಅಮೃತಸರಕ್ಕೆ (ಸುಂದರ ನಗರವೆನ್ನಲಾಗದಿದ್ದರೂ ಸ್ವರ್ಣ ಮಂದಿರ ಹಾಗೂ ಪಕ್ಕದ ಜಲಿಯನ್ ವಾಲಾ ಬಾಗ್ ನೋಡತಕ್ಕ ಸ್ಥಳಗಳು) ಕಂಪನಿಯ ಕಾರ್ಯ ನಿಮಿತ್ತ ಹೋಗಿದ್ದೆ.  ಡಿಸೆಂಬರ್ ತಿಂಗಳ ಒಂದು ಬೆಳ್ಳಂಬೆಳಿಗ್ಗೆ ಸುಮಾರು ೫ ಗಂಟೆಗೆ ರೈಲಿನಿಂದ ಇಳಿದೆ. ಇಳಿಯುವಲ್ಲಿಯವರೆಗೆ ರೈಲಿನ ಎಸಿಯ ಕಾರಣದಿಂದಾಗಿ ಚಳಿಯ ಅನುಭವವಾಗೇ ಇರಲಿಲ್ಲ. ಹೇಳೀ ಕೇಳಿ ಕರಾವಳಿಯಲ್ಲಿ ಹುಟ್ಟಿ ಬೆಳೆದ ನನಗೆ ಚಳಿ ಅಂದರೆ ಬೆಂಗಳೂರಿನ ಚಳಿ ಗೊತ್ತು. ಅದನ್ನು ತಡೆಯಲೋಸುಗ ಒಂದು ಜಾಕೆಟ್ ಅಷ್ಟೇ ನನ್ನಲ್ಲಿರುವುದು....ಸಾಕೆಂದುಕೊಂಡಿದ್ದೆ. ಆದರೆ ಇಳಿದ ತಕ್ಷಣ ಅಲ್ಲಿನ ಚಳಿಗೆ (ಆ ದಿನ ೨ ಡಿಗ್ರಿ ಉಷ್ಣತೆಯಿತ್ತೆಂದು ಆಮೇಲೆ ತಿಳಿದಿದ್ದು) ನಡುಗತೊಡಗಿದೆ. ಜಾಕೆಟ್-ನ ಜಿಪ್ ಅನ್ನು ಹಾಕಿಕೊಂಡರೂ ಚಳಿ ತಡೆಯಲಾಗುತ್ತಿಲ್ಲ. ಚಹಾ ಕುಡಿದರೆ ಸರಿಯಾಗಬಹುದೆಂದುಕೊಂಡು ಅಕ್ಕ ಪಕ್ಕ ಹುಡುಕತೊಡಗಿದಾಗ ತಿಳಿಯಿತು. ಎಲ್ಲರೂ ಬರೇ ಜಾಕೆಟ್ ನಲ್ಲಿರುವ ನನ್ನನ್ನು ವಿಚಿತ್ರವಾಗಿ ನೋಡಹತ್ತಿದ್ದರು. ಚಹಾ ಸಿಗಲಿಲ್ಲ. ರೈಲ್ವೇ ಸ್ಟೇಷನ್ನಿನಿಂದ ಹೊರಗಡೆ ಬಂದೆ... ಅಲ್ಲಿ ಇನ್ನೂ ಚಳಿ ಜಾಸ್ತಿಯಾಯಿತು. ಅಲ್ಲೇ ಪಕ್ಕದಲ್ಲಿ ವಂದು ಟೀ ಅಂಗಡಿ ಜೊತೆಯಲ್ಲೇ ಬೆಂಕಿಯ ಮುಂದೆ ಕುಳಿತು ಚಳಿ ಕಾಸುತ್ತಿದ್ದ ಕೆಲ ಕೂಲಿಯವರೂ ಕಂಡರು. ಖುಷಿಯಾದೆ ...ದಾಪುಗಾಲಿಟ್ಟೆ.... ’ಚಾಯ್ ದೇನಾ’ ಎನ್ನುತ್ತ ಬೆಂಕಿಯ ಮುಂದೆ ನಾನೂ ಕುಕ್ಕರಿಸುತ್ತಿದ್ದಂತೇ ಮುದುಕ ಸರದಾರನೊಬ್ಬ ಪಂಜಾಬಿಯಲ್ಲಿ ಕೇಳಿದ. ’ಆಂ’ ಎಂದೆ ಅರ್ಥವಾಗದೇ. 
’ಕಹಾಂ ಸೇ ಆಯೇ ಹೋ?’ ಎಂದ ’ಮುಂಬಯ್ ಸೇ’ ಎಂದೆ ಅರ್ಥವಾದ ಪ್ರಶ್ನೆಗೆ ಉತ್ತರಿಸುತ್ತ. 
’ಬೇಟಾ ಯೇ ಬಂಬಯ್ ನಹೀ ಹೈ.... ಪಂಜಾಬ್ ಹೈ ಪಂಜಾಬ್.. ಯಹಾ ಟಂಡ್ ಪಡತಾ ನಹೀ ಲಗತಾ ಭೀ ಹೈ. ನ ಶಾಲ್ ನ ಟೋಪಿ.. ನಂಗಾ ಆಯೇ ಹೋ’ ಎಂದು ಮರ್ಯಾದೆ ತೆಗೆದ ಎಂದುಕೊಂಡೆ. ಹಾಗೆಂದವನೇ ತನ್ನ ಪಕ್ಕದಲ್ಲಿದ್ದ ಹಳೆಯ ಹರುಕು ಚಾದರ ನನ್ನೆಡೆಗೆ ಎಸೆದು ಹೊದ್ದುಕೋ ಎಂದ. ಜಡ್ಡು ತುಪ್ಪದ ವಾಸನೆಯಾದರೂ ಅದನ್ನೇ ಸುತ್ತಿಕೊಂಡೆ ನಾಚುತ್ತ. 

 ಸರದಾರರ ಬಗೆಗೆ ಗೌರವ ಬಂದಿದ್ದೇ ಆವಾಗ. ಸಾಮಾನ್ಯವಾಗಿ ಸರದಾರರು ಸಹೃದಯರು.... ಪರೋಪಕಾರಿಗಳು. ಅವರೇ ಹೇಳುವಂತೇ ’ಸರ್ದಾರ್ ಹೂಂ ಸರ್ದಾರ್... ಬಡೇ ದಿಲ್-ವಾಲಾ ಹೂಂ’. ಅದು ಸತ್ಯ ಅನ್ನಿಸಿಹೋಗಿತ್ತು ಅಂದು.


* ಕಟ್ಟಾ ಸಿಖನೊಬ್ಬ ಹಣಿಗೆ ಮತ್ತು ಕತ್ತರಿ ಮುಟ್ಟುವುದಿಲ್ಲ.
ಹೌದು ಕಟ್ಟಾ ಸಿಖ್ಖನೊಬ್ಬ ಹಣಿಗೆ ಮತ್ತು ಕತ್ತರಿಯನ್ನು ಜೀವಮಾನದಲ್ಲೇ ತಮ್ಮ ದೇಹದ ಯಾವುದೇ ಭಾಗದ ಕೂದಲಿಗೆ ತಾಕಿಸುವುದಿಲ್ಲ.  ತಲೆ ಕೂದಲಂತೂ ಬಿಡಿ ಮುಡಿ ಕಟ್ಟಿ ಮುಂಡಾಸು (ಪಗಡಿ ಅನ್ನುತ್ತಾರೆ ಅವರದನ್ನು) ಸುತ್ತುತ್ತಾರೆ. ಗಡ್ಡವನ್ನೂ ಕೂಡ ಟ್ರಿಮ್ ಮಾಡುವುದಿಲ್ಲ. ಗಡ್ಡಕ್ಕೆ ಸಲ್ಪ ವ್ಯಾಸಲೀನ್ ಹಚ್ಚಿ ಸರಿಯಾಗಿ ಕೂರುವಂತೇ ನೀವುತ್ತಾರದನ್ನು. ಕುತೂಹಲಕಾರಿ ಘಟನೆಯಿದೆ ಇಲ್ಲಿ. 
ಅದೇ ದಿನ ಬೆಳಿಗ್ಗೆ ಅಂತೂ ಇಂತೂ ನಡುಗುತ್ತ ಚಳಿಯಲ್ಲಿ ಸೈಕಲ್ ರಿಕ್ಷಾದಲ್ಲಿ ಕೂತುಕೊಂಡು ಮೊದಲೇ ಕಾದಿಟ್ಟಿದ್ದ ಹೊಟೇಲ್ ರೂಂ ತಲುಪಿದೆ. ನಾಲ್ಕಿಂಚು ದಪ್ಪಗಿನ ರಜಾಯಿ ಹೊದ್ದು ಸುಮಾರು ೮ ಗಂಟೆಯವರೆಗೂ ಮಲಗಿದ್ದ ನನಗೆ ಅಲ್ಲಿನ ವಿತರಕ (Distributer) ಫೋನಾಯಿಸಿದಾಗಲೇ ಎಚ್ಚರಾದದ್ದು. ಮೊದಲು ದೂರವಾಣಿಯಲ್ಲಿ ಮಾತಾಡಿ ಪರಿಚಯವಷ್ಟೇ ಬಿಟ್ಟರೆ ಮುಖಪರಿಚಯ ಇರಲಿಲ್ಲ ನನಗೆ. ಸರಿ ರೂಮಿಗೆ ಬಂದು ಕರಕೊಂಡು ಹೋಗುವೆನೆಂದ.... ನಾ ಎದ್ದು ಸ್ನಾನ ಮುಗಿಸಿ ಬಚ್ಚಲಿನಿಂದ ಹೊರಬರುತ್ತಿದ್ದೆ... ಆಗಲೇ ತಲುಪಿಬಿಟ್ಟಿದ್ದ ಸರದಾರ. ನಾನು ಬಟ್ಟೆ ತೊಟ್ಟು ತಯಾರಾದೆ... ಕೂದಲು ಬಾಚಲು ಹಣಿಗೆಗಾಗಿ ತಡಕಾಡಿದೆ... ಇರಲಿಲ್ಲ. ಗೆಳೆಯರೊಟ್ಟಿಗಿನ ಸಲುಗೆಯಿಂದ ಅದೇ ಸರದಾರನಲ್ಲಿ ’ಹಣಿಗೆ ಇದೆಯಾ?’ ಎಂದೆ ಒಮ್ಮೆ. ’ಆಂ?’ ಎಂದ ಮರುಪ್ರಶ್ನೆಯಂತೇ. ಮತ್ತೊಮ್ಮೆ ಕೇಳಿದೆ ’ಕಂಗೀ ಹೈ ತೋ ದೇನಾ ಜರಾ’. 

ಅದೇ ನಾ ಮಾಡಿದ ಪ್ರಮಾದ. ’ಭಾಯ್ ಸಾಬ್ ಬಾಡ್ ಮೇ ಜಾವ್... ಕರ್ಪಾನ್ ಹೈ ದೂಂ?’ ಎಂದ ಅಚಾನಕ್ಕಾಗಿ. ನನಗೋ ಆಶ್ಚರ್ಯ. (ಕರ್ಪಾನ್ ಎಂದರೆ ಚಾಕುವಿನ ಹೋಲಿಕೆಯಿರುವ ವಂದು ಚಿಕ್ಕ ಕತ್ತಿ... ಅದನ್ನು ಸಿಖ್ ಪಂಥೀಯರು ವಂದು ದಾರಕ್ಕೆ ಕಟ್ಟಿ ಬ್ರಾಹ್ಮಣರ ಜನಿವಾರ ಧರಿಸುವ ರೀತಿಯ ಉಲ್ಟಾ ನೇತುಕೊಂಡಿರುತ್ತಾರೆ)   ಇದೇಕೆ ಇವನು ಹೀಗೆಂದ? ಆದರೂ ಸಮಝಾಯಿಶಿ ಕೊಡುವ ಪ್ರಯತ್ನ ಮಾಡಿದೆ. ’ಸರ್ ಜೀ ಕಂಗೀ ಲಾನಾ ಭೂಲ್ ಗಯಾ.... ಇಸ್ ಲಿಯೇ ಮಾಂಗ್ ರಹಾ ಥಾ ಸಾರಿ’ ಎಂದೆ. ಆಗ ಬಹುಶಃ ಅರ್ಥವಾಗಿರಬೇಕು ಅವನಿಗೆ ಇವನು ಅಮಾಯಕನೆಂದು.
 ಹೇಳಿದ... "ನೋಡು ಗೆಳೆಯ ನಾನೊಬ್ಬ ಸರದಾರ.. ಪಕ್ಕಾ ಸರದಾರನೊಬ್ಬ ಹಣಿಗೆ ಮತ್ತು ಕತ್ತರಿ ಉಪಯೋಗಿಸುವುದಿಲ್ಲ... ಮತ್ತು ನಮ್ಮ ಧರ್ಮದ ಪ್ರಕಾರ ಆ ಎರಡೂ ವಸ್ತುಗಳನ್ನು ಇಟ್ಟುಕೊಳ್ಳಲೂಬಾರದು. ಅಷ್ಟೇ ಅಲ್ಲ ... ಯಾರಾದರೂ ನಮ್ಮಲ್ಲಿ ಆ ವಸ್ತುವನ್ನು ಕೇಳಿದರೂ ಊಡ ನಮಗೆ ಸಿಟ್ಟು ಬರುತ್ತದೆ.. ಮತ್ತು ಕರ್ಪಾನ್ ತೆಗೆಯಲೂ ನಾವು ಹಿಂಜರಿಯುವುದಿಲ್ಲ" 


ಅಬ್ಬಾ ಬಚಾವಾದೆ ... ಆಗ ನನ್ನ ಬೊಡ್ಡು ತಲೆಗೆ ವಿಷಯ ಹೊಳೆಯಿತು. ಇವನ ಸಿಟ್ಟಿಗೆ ಕಾರಣ ಇದು. ಒಂದೊಮ್ಮೆ ಅವರಲ್ಲಿರದ... ಅವರಿಟ್ಟುಕೊಳ್ಳದ ಆ ಹಣಿಗೆ ಕತ್ತರಿಯನ್ನು ಕೇಳಿದರೆ ಅವರಿಗೆ ತಮ್ಮನ್ನು ಕೀಟಲೆ ಮಾಡುತ್ತಾರೆಂದೇ ಅನ್ನಿಸುತ್ತದೆ... ಅಷ್ಟೊಂದು ಮುಂಗೋಪಿಗಳೂ ಕೂಡ ಆಗಿರುತ್ತಾರೆ 


ಕ್ಷಮೆ ಯಾಚಿಸಿದೆ ಅವನಲ್ಲಿ.. ... ’ನನಗೆ ನಿಮ್ಮ ಮತದ ಬಗ್ಗೆ ಅಷ್ಟೊಂದು ಮಾಹಿತಿಯಿಲ್ಲ ಗುರುವೇ... ನೀನೊಬ್ಬನೇ ನನಗೆ ಸರದಾರ ಪರಿಚಯವಿರುವುದು. ಈಗ ತಿಳಿಯಿತು ಕ್ಷಮಿಸು” ಎಂದು ವಿನಂತಿ ಮಾಡಿದೆ. ’ಕೋಯೀ ನಹೀ ಮೆರೇ ಭಾಯಿ’ ಎಂದು ದೊಡ್ಡ ಹೃದಯದವನಾದ .. ಬಂದು ಜಾದೂ ಕೀ ಝಪ್ಪೀ ಕೊಟ್ಟ ಪುಟ್ಟ ನಾಯಿಮರಿಯೊಂದನ್ನು ಅಪ್ಪಿದಂತೇ. !!


(ಮುಂದಿದೆ)
** ಲಂಗರ್ 
***  ಸರದಾರಕೋ ಬಾರಾ ಕ್ಯೋಂ ಬಜತಾ ಹೈ?ಹೆಸರಿನ ತಲೆಬಿಸಿ

ಆಗ ಅಮ್ಮನ ತೊಡೆಯ ಮ್ಯಾಲೆ ಬೆಚ್ಚಗೆ ಮಲಗಿದ್ದ ನಂಗೆ .... ಅಜ್ಜನೆಂಬ ಹಿರಿಯನ ಆದೇಶದ ಮೇರೆಗೆ ಈ ಇದೇ ನಮ್ಮ ಅಗ್ನಿಹೋತ್ರಿ ರಾಂ ಭಟ್ ಮಾಸ್ತರಿದ್ರಲೀ ಅವರ ದೊಡ್ದಪ್ಪನೋ ಅಜ್ಜನೋ ಆಗಿರವು ಪುರೋಹಿತರು.....ಅವರ ಎದುರಿಗೆ ಯನ್ನ ಅಪ್ಪ ಅಕ್ಕಿ ಕಾಳಿನ ಮ್ಯಾಲೆ ಬರದು ಜಾತಗ ಮಾಡಿಸಿದ ಹೆಸರು - ಮೇಘಶ್ಯಾಮ

ಮತ್ತೆ ನನ್ನ ಬಲಗೈ, ತಲೆಯ ಮ್ಯಾಲಿಂದವಾ ಎಡಗಿವಿಯ ಮುಟ್ಟತ ಇಲ್ಯ ಹೇಳಿ ನೋಡಿಯಾದ ಮೇಲೆ (ನನ್ನ ಜನ್ಮದಿನಾಂಕ ನೆನಪಿದ್ದರೂವ ಹಿರಿಯರು ನಡೆಸಿಗಂಡು ಬಂದ ವಿದ್ಯೆ - ರಿವಾಜು - ರೂಢಿ ಹೇಳಿ) ನನ್ನ ಶಾಲೆಗೆ ಸೇರಸಕಾರೆ ಭಟ್ಟ ಎಂಬ ಹೆಸರು ಬಪ್ಪಲಾಗ ಎಂಬ ಕಾರಣಕ್ಕ ಅಥವ  ಮುಂದೆಂದಾರೂ ಕಾನೂನೂ ಬದಲಾಗಿ ಹೆಸರನ್ನೊಂದೇ ನೋಡಿ  ಮೀಸಲಾತಿ ಕೊಡಗು ಎಂಬ ದೂರಾಲೋಚನೆಯಿಂದಲೋ ಮತ್ತೆ ಅದೇ ಅಜ್ಜನ ಅಧಿಕಾರದ ಆದೇಶದ ಮೇರೆಗೆ ಇಟ್ಟ ಅಧಿಕೃತ (official) - ಶಾಲಾ ನೋಂದಣಿಯ ಹೆಸರು ಬಿ ಪಿ ಎಮ್ ಶ್ಯಾಮ. ಪೂರ ಇದನ್ನು ಬಿಡಿಸಲೆ ಹೋದರೆ ’ಭಡ್ತಿ ಪರಮೇಶ್ವರನ ಮಗ ಮೇಘ ಶ್ಯಾಮ’ ಹೇಳಾಗವಡ (ಅದೇ ಅಜ್ಜನೇ ಹೇಳಿದ್ದು)  ಹೇಳಿ ತಿರಚಿ...ಖುದ್ದು ನಿಂತು ಇಟ್ಟ ಹೆಸರನ್ನೇ  ಛಿದ್ರ ಛಿದ್ರವಾಗಿಸಿದ (ಅಕ್ಕಿ ಕಾಳಿನ ಮರ್ಯಾದೆ ತೆಗದು) ಯನ್ನಜ್ಜ - ಪುಣ್ಯಾತ್ಮ ಅಂವ. ಅಲ್ಲ ಅವನ ತಪ್ಪಿಲ್ಯಪ... ಆವಾಗ ವನ್ನಮನೀ ಅಲೆ ಇತ್ತು.

ಸರಿ ಶಾಲೆಗೆ ಹೋಗಿ ಬಂದು ಮಾಡತಿದ್ದ ನಂಗೆ ನನ್ನ ಹೆಸರು ಬಿ ಪಿ ಎಮ್ ಶ್ಯಾಮನಿಂದ ಬದಲಾಗಿ ಬಿ ಪಿ ಎಮ್ ಶ್ಯಾಮು ವಾಗಿ ಪರಿಣಮಿಸಿದ್ದು ಗೊತ್ತಾಗಿದ್ದೇ ೭ ಮುಗದು ೮ ನೆತ್ತಿಗೆ ಹೋದಾಗ. ಆವಾಗ ಯನ್ನ ಮಾತ ಕೇಳವ್ಯಾರು?

ಸರಿಯಪಾ ಅಂತೂ ಇಂತೂ ಆಡ ಆಡತವ ೧೦ ಮುಗತ್ತು ... ಎಸ್ಸೆಸ್ಸೆಲ್ಸಿ ಸರ್ಟಿಪಿಕೇಟು ಬಂದಾಗ ಗೊತ್ತಾದದ್ದು - ಹಾಂ ನನ್ನ ಹೆಸರು ಶ್ಯಾಮು ಬಿ ಪಿ ಎಂ.

ಸರಿಯಪಾ... ಮುಗತ್ತು ಎಲ್ಲ ಯನ್ನ ಜೀವನದ ವ್ಯಾಸಂಗದ ಸಂಗ ಸಾಕು ಹೇಳಿ ಸರ್ವ ವ್ಯಾಸಂಗ ಪರಿತ್ಯಾಗಿಯಾಗಿ ನೌಕರಿಗೆ ಹೊರಟೆ. ಎರಡೆ ಮೂರೇ ವರ್ಷದಲ್ಲಿ ಯನ್ನ ಪಾನ್ ಕಾರಡು (PAN Card) ಮಾಡಸವು ಹೇಳದ ಕಂಪನಿಯವ್ವು. ಅದೆಂತಕೋ ಬೇಕಾಗ್ತಡ. ’ಸರಿ ನಿಂಗನೇ ಮಾಡಸಗಳಿ’ ಹೇಳಿ ಅನುಮತಿ ಕೊಟ್ಟೆ ತಗಳಪಾ.... ಯನ್ನ ಹೆಸ್ರನ ವನ್ನಮನಿ ಮತ್ತೊನ್ನಮನಿ ತಿದ್ದುಬುಟ ಅವು. ಮ್ಯಾಲಿಂದ ಅದೆಂತೋ ಅಪ್ಪನ ಹೆಸರೂ ಸೇರಿ ಬರವಡ ಹೇಳಿ ಯನ್ನ ಹೆಸರ ’ಶ್ಯಾಮ ಪರಮೇಶ್ವರ ಭಟ್ಟ’ ಹೇಳಿ ಮಾಡದ. ವನ್ನಮನೀ ಸರೀನೇಯ ಅನಿಸ್ತು ಯಂಗೆ ಆವಾಗ. ಯನ್ನ ಸಂತಿಗೆ ಅಪ್ಪಯ್ಯನೂ ಬಂದ ಹೇಳಿ ಖುಷಿನೇ ಆತು.

ಆತು ಅದಕೂ ತಲೆ ಕೆಡಿಸ್ಗಂಡಿದ್ನಿಲ್ಲೆ...... ಈಗ ಪಾಸಪೋರಟ ಮಾಡುವ ಪ್ರಸಂಗ ಬಂತು. ದರಿದ್ರ ಅದು. ಯಾನೇ ಬ್ಯಾರೆ ಬ್ಯಾರೆ ಹೇಳಾಗೋತು. ಈ ಬಿಪಿಎಂ ಶ್ಯಾಮು... ಶ್ಯಾಮು ಬಿಪಿಎಮ್ .....ಶ್ಯಾಮ ಪರಮೇಶ್ವರ ಭಟ್ಟ ಈ ಮೂರರಲ್ಲಿ ನೀ ಯಾರು ಅಂದ ಪೋಲೀಸನಂವಾ. ಆತ ಇಲ್ಯ. ಸಾಕಪಾ ಸಾಕು. !!

ಸರೀ .. ಈವಾಗ ಅಪ್ಪದಾಜು... ಮುಂದೆಂತ ಮಾಡವಪಾ ಹೇಳಿ ಅವಂದೇ ಭಾಷೆ (ಹಿಂದಿ) ಯಲ್ಲಿ ಕೇಳದೆ ಪೋಲೀಸಮಾವನ. ಅವನೇ ಉಪಾಯ ಹೇಳದ ಯೆಂತಪಾ ಅಂದ್ರೆ.... "ನೋಟರೀ ಹತ್ರ ಹೋಗು ... ವಂದು  ಅಫಿಡವಿಟ್ ಮಾಡಸು.... ಅದರ ಕಾಪಿ ತಗಂಡೋಗಿ ಯಾವುದಾದರೂ ಎರಡು ಪೇಪರಲ್ಲಿ (ದಿನಪತ್ರಿಕೆ .. ಅದೂ ವಂದು ಇಂಗ್ಲೀಷು ಇನ್ನೊಂದು ಸ್ಥಳೀಯ ಭಾಷೆಯಲ್ಲಿರವು) ಕೊಡು. ಕಡೆಗೆ ಮತ್ತೆ ಅರ್ಜಿ ಗುಜರಾಯಿಸು" ಹೇಳಿ... ಆತಾ... ಸರಿಯಪಾ ಅದೆಲ್ಲ ಮಾಡಿ ಈಗ ವನ್ನಮನಿ ಪಾಸಪೋರಟ್ ಮಾಡಕಂಡಾತು ಹೇಳಾತು. ಆದ ಖರ್ಚು ಬಿಡು... ಗಂಡ ಸತ್ತ ದುಃಖ ಬ್ಯಾರೆ.. ಬೋಳ್ ಕೆತ್ತದ ನೋವು ಬ್ಯಾರೆ ಹೇಳಿ ಹೇಳತ್ವಲೀ ಹಾಂಗೇಯ. ಈಗ ಎಲ್ಲ ನಿಶ್ಚಿಂತೆ ಹೇಳವಾಂಗೇನೂ ಇಲ್ಲೆ.... ಬ್ಯಾಂಕ್ ಅಕೌಂಟ್ ಲ್ಲಿ ವಂದು ಹೆಸರು.... ಪಾಸಪೋರಟಲ್ಲಿ ವಂದು ಹೆಸರು... ಎಲ್ಲ ವನ್ನಮನಿ ಚಿಂದಿ ಚಿತ್ರಾನ್ನ. 

ಹೋಗಲಿ ಈ ತಲೆಬಿಸಿ ಹೋಗಲಿ ಹೇಳೇ ಬರೆದ ಬರವಣಿಗೆ ಇದು ಬಿಲ.... ಈಗ ಗಜಾನನ ಗಣಪತಿ ಹೇಳಿ ಹೆಸರಿಟಗಂಡು ಗಜ್ಜು.. ಗಣು ಗಪ್ಪತಿ.. ಗಪ್ಪು ಹೇಳಿ ಕರೆತ್ವಿಲ್ಯ??!! ಅದಕಿಂತ ಯನ್ನ ಹೆಸರೇ ಅಡ್ಡಿಲ್ಲೆ,,... ಬಗೇಲಿ ಹೆಚ್ಚು ಕಮ್ಮಿ ಆದ್ರೂವ ಒಂಚೂರಾರು ಇದ್ದಲಿ... ತೊಂದರಿಲ್ಲೆ ಹೇಳಿ ಸಮಾಧಾನಮಾಡಕಂಡು ಬದಕ್ತ ಇದ್ದಾಜಪಾ... ದೇವರಿದ್ದಾ... ನೋಡಕತ್ತಾ... ದೊಡ್ಡಂವಾ ...ಅಲ್ದ?!!